ರಾಜ್ಯ ಸರಕಾರಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

Update: 2023-08-21 16:21 GMT

ಬೆಂಗಳೂರು, ಆ.21: ಕೇಂದ್ರ ಸರಕಾರಕ್ಕೆ ಹದಿನೈದನೆ ಹಣಕಾಸು ಆಯೋಗವು 2020-21ನೆ ಸಾಲಿನ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಕರ್ನಾಟಕಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

14ನೆ ಹಣಕಾಸು ಆಯೋಗವು 2020-21 ರಿಂದ 2025-26ನೆ ಸಾಲಿಗೆ ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.4.71ರಷ್ಟು ನಿಗದಿ ಮಾಡುವಂತೆ ಶಿಫಾರಸ್ಸು ಮಾಡಿದ್ದರೂ 15ನೆ ಹಣಕಾಸು ಆಯೋಗವು ಈ ಪ್ರಮಾಣವನ್ನು ಶೇ.3.647ಕ್ಕೆ ಇಳಿಸಿದೆ. ಹಣಕಾಸು ಆಯೋಗವು ಅಳವಡಿಸಿಕೊಂಡಿರುವ ಮಾನದಂಡದಿಂದಾಗಿ ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

2011-12ರಲ್ಲಿ ಎಲ್ಲ ರಾಜ್ಯಗಳ ಜಿಎಸ್‍ಡಿಪಿ ಸರಾಸರಿ ಶೇ.9ಕ್ಕಿಂತ ಕಡಿಮೆ ಇದ್ದರೆ, ನಮ್ಮ ರಾಜ್ಯದ ಜಿಎಸ್‍ಡಿಪಿಯನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ. 15ನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಯಾವುದೆ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಕೂಡಲೇ 5495 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

2011-12ರಲ್ಲಿ ಐಟಿ ಸಂಬಂಧಿತ ಸೇವೆಗಳಲ್ಲಿ ರಾಜ್ಯದ ಜಿಎಸ್‍ಡಿಪಿ ಗಣನೀಯವಾಗಿ ಹೆಚ್ಚಳವಾಗಿದೆಯಾದರೂ ಐಟಿ ಸೇವೆಗಳ ರಫ್ತು ಶೂನ್ಯ ದರವನ್ನು ಹೊಂದಿರುವುದರಿಂದ ರಾಜ್ಯದ ತೆರಿಗೆಗಳಿಗೆ ಈ ಸೇವೆಗಳು ಯಾವುದೆ ಸಹಕಾರಿಯಾಗಿಲ್ಲ. 14ನೆ ಹಣಕಾಸು ಆಯೋಗದ ಶಿಫಾರಸಿಗೆ ಹೋಲಿಸಿದರೆ 15ನೆ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಪಾಲು ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು ತೆರಿಗೆ ಹಂಚಿಕೆಯಲ್ಲಿ 37,011 ಕೋಟಿ ರೂ.ಕಡಿಮೆಯಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ರಾಜ್ಯದ ಸಂಪನ್ಮೂಲಗಳು ಮತ್ತು ಕೇಂದ್ರ ಸರಕಾರದ ಹಣಕಾಸಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಅನುದಾನಗಳ ಶಿಫಾರಸನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ. ಆದರೆ, ಕರ್ನಾಟಕ ರಾಜ್ಯಕ್ಕೆ ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಮತ್ತು ತೆರಿಗೆ ಹಂಚಿಕೆಯಲ್ಲಿ ತೀವ್ರ ಕಡಿತ ಮಾಡಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯದ ಹಣಕಾಸಿನ ಸ್ಥಿತಿಗೆ ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

2021-26ನೆ ಸಾಲಿನಲ್ಲಿ ಹಣಕಾಸು ಆಯೋಗ 6 ಸಾವಿರ ಕೋಟಿ ರೂ.ಗಳನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಹಾಗೂ ಪೆರಿಪೆಲರ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದರೆ, ಯಾವುದೇ ಅನುದಾನ ಕರ್ನಾಟಕ ಸರ್ಕಾರಕ್ಕೆ ನೀಡಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಹಿನ್ನಡೆ ಆಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಕೋರಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News