ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ನಿಂತಿರುವ ಸಿದ್ದರಾಮಯ್ಯರ ನಡೆ ರಾಜಕೀಯ ಪ್ರೇರಿತ : ಆರ್.ಅಶೋಕ್

Update: 2024-03-23 16:26 GMT

    Photo:x/@RAshokaBJP

ಬೆಂಗಳೂರು: ಬರ ಪರಿಹಾರದ ವಿಚಾರವಾಗಿ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ರಾಜಕೀಯ ಪ್ರೇರಿತವಾದದ್ದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಈ ಬಗ್ಗೆ ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದರೆ ತಪ್ಪಾಗಲಾರದು. ಕೈಲಾಗದವನು ಮೈಪರಚಿಕೊಂಡ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರಕಾರದತ್ತ ಬೊಟ್ಟು ತೋರಿಸುವುದೇ ತಮ್ಮ ಏಕೈಕ ಕೆಲಸ ಎಂದು ಭಾವಿಸಿದಂತಿದೆ ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರಕಾರ ಬರ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪ ಎದುರಾದಾಗ ಕೇಂದ್ರ ಸರಕಾರದ ನೆರವಿಗೆ ಕಾಯದೆ ರಾಜ್ಯ ಸರಕಾರದ ಹಣದಿಂದಲೇ ಪರಿಹಾರ ನೀಡಿತ್ತು. ಆದರೆ ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದ ಸಿದ್ದರಾಮಯ್ಯ ಸರಕಾರ ಬರ ಪರಿಹಾರದಲ್ಲೂ ರಾಜಕೀಯ ಮಾಡಿ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

2019ರಲ್ಲಿ 9,72,517 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 6,71,314 ಫಲಾನುಭವಿಗಳಿಗೆ 1232.20 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2020ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2021ರಲ್ಲಿ 14,93,811 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 18,56,083 ಫಲಾನುಭವಿಗಳಿಗೆ 2446.10 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್‌ ಬೆಳೆಹಾನಿ ಆಗಿತ್ತು. ಆಗ 14,62,841 ಫಲಾನುಭವಿಗಳಿಗೆ 2031.15 ಕೋಟಿ ರೂ. ಪರಿಹಾರ ನೀಡಲಾಗಿತ್ತ ಎಂದು ಅಶೋಕ್ ವಿವರಿಸಿದ್ದಾರೆ.

ಸಿದ್ದರಾಮಯ್ಯನವರ ಈ ನಾಟಕ ಹೊಸದೇನಲ್ಲ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ನಾಟಕವಾಡುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್ ಸರಕಾರಕ್ಕೆ ಹೆಚ್ಚು ಮುಖ್ಯ ಅನ್ನಿಸುತ್ತಿದೆ ಎಂದು ಅಶೋಕ್ ತಿಳಿಸಿದ್ದಾರೆ

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನೋಡಿ ಸಿದ್ದರಾಮಯ್ಯನವರು ಪಾಠ ಕಲಿಯಬೇಕು. ಚುನಾವಣೆ ಇದ್ದಾಗ ರಾಜಕೀಯ ಮಾಡಿ. ಆದರೆ ಚುನಾವಣೆ ಮುಗಿದ ಮೇಲೆ ರಾಜಕೀಯ ಪಕ್ಕಕ್ಕಿಟ್ಟು ಆಡಳಿತದ ಕಡೆ ಗಮನ ಹರಿಸಿ, ಜನರ ಹಿತಾಸಕ್ತಿ ಕಾಪಾಡಲು ಆದ್ಯತೆ ನೀಡಿ. ಅದು ಬಿಟ್ಟು ರಾಜಕೀಯ ಪ್ರಖರತೆ ಸೃಷ್ಟಿಸಲು ಪದೇ ಪದೇ ಜನರ ಹಿತಾಸಕ್ತಿಯನ್ನೇ ಬಲಿಕೊಡುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಇತಿಹಾಸ ನಿಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News