‘ಸಿದ್ದಾರ್ಥ ವಿಹಾರ ಟ್ರಸ್ಟ್’ಗೆ ನೀಡಿದ ನಿವೇಶನ ವಾಪಸ್: ಕೆಐಎಡಿಬಿಗೆ ಪತ್ರ
ಬೆಂಗಳೂರು: ನಿವೇಶನ ಹಂಚಿಕೆ ವಿವಾದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಒಡೆತನಕ್ಕೆ ಸೇರಿದ ‘ಸಿದ್ದಾರ್ಥ ವಿಹಾರ ಟ್ರಸ್ಟ್’, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಂಜೂರು ಮಾಡಿದ್ದ ನಾಗರಿಕ ಬಳಕೆ (ಸಿಎ) ನಿವೇಶನವನ್ನು ವಾಪಸ್ ನೀಡಲು ನಿರ್ಧರಿಸಿದೆ.
ಬೆಂಗಳೂರಿನ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್‍ನಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‍ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮಂಜೂರು ಮಾಡಿದ್ದ ಐದು ಎಕರೆ ವಿಸ್ತೀರ್ಣದ ನಾಗರಿಕ ಬಳಕೆ (ಸಿಎ) ನಿವೇಶನವನ್ನು ವಾಪಸ್ ನೀಡಲಾಗುವುದು ಎಂದು ಟ್ರಸ್ಟ್ ಪ್ರಕಟಿಸಿದೆ.
ಸಿದ್ದಾರ್ಥ ವಿಹಾರ್ ಟ್ರಸ್ಟ್ ನ ಸದಸ್ಯ ರಾಹುಲ್ ಖರ್ಗೆ 5 ಎಕರೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯುವುದಾಗಿ ಕೆಐಎಡಿಬಿಗೆ ಪ್ರಸ್ತಾವ ಸಲ್ಲಿಸಿದ್ದರು. ಒಟ್ಟು 25 ಕೋಟಿ ರೂ.ಹೂಡಿಕೆ ಮಾಡಲಿದ್ದು, 150ಮಂದಿಗೆ ಉದ್ಯೋಗ ನೀಡಲಿದೆ ಎಂದು ತಿಳಿಸಲಾಗಿತ್ತು. ಆದರೆ, ಪ್ರಸ್ತಾವ ಸಲ್ಲಿಸುವ ವೇಳೆ ಪಾನ್‍ಕಾರ್ಡ್ ಸಲ್ಲಿಸಿರಲಿಲ್ಲ. ಇದನ್ನು ಪರಿಗಣಿಸಬಹುದೆಂದು ಕೈಗಾರಿಕಾ ಸಚಿವ ಎ.ಬಿ.ಪಾಟೀಲ್ ಅಧ್ಯಕ್ಷತೆಯ ಏಕಗವಾಕ್ಷಿ ಸಮಿತಿ ಸಭೆ ಶಿಫಾರಸು ಮಾಡಿತ್ತು.
ನಿಯಮ ಉಲ್ಲಂಘನೆಯಾದರೂ ಪ್ರಭಾವ ಬಳಸಿ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಜೊತೆಗೆ ಆರ್‍ಟಿಐ ಕಾರ್ಯಕರ್ತ ಗಿರೀಶ್ ಕಲ್ಲಹಳ್ಳಿ, ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ ಆರೋಪಿಸಿ ಜಾರಿ ನಿರ್ದೇಶನಾಲಯ (ಈಡಿ), ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದುರುದ್ದೇಶ ಪೂರಿತ, ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ಎದುರಿಸುತ್ತಿರುವಾಗ ಶಿಕ್ಷಣ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಟ್ರಸ್ಟ್ ಅನ್ನು ಉನ್ನತ ಮೌಲ್ಯಗಳು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಉತ್ಸಾಹದ ಮೇಲೆ ಸ್ಥಾಪಿಸಲಾಗಿದೆ. ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಮೂಲಕ ಅಶಕ್ತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಪ್ರಯತ್ನಗಳನ್ನು ಬೇರೆಡೆಗೆ ತಿರುಗಿಸುವ ವಿವಾದಗಳನ್ನು ನಾವು ಬಯಸುವುದಿಲ್ಲ ಎಂದು ಸಿದ್ದಾರ್ಥ ವಿಹಾರ ಟ್ರಸ್ಟ್ ಪತ್ರದಲ್ಲಿ ತಿಳಿಸಿದೆ.
ಆದ್ದರಿಂದ ನಮ್ಮ ಪ್ರಸ್ತಾವವನ್ನು ಗೌರವಯುತವಾಗಿ ಹಿಂಪಡೆಯುತ್ತೇವೆ. ಮತ್ತು ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಸಂಶೋಧನಾ ಕೇಂದ್ರಕ್ಕಾಗಿ ವಿನಂತಿಸಿದ ಸಿಎ ನಿವೇಶನ ಹಂಚಿಕೆಯನ್ನು ರದ್ದುಗೊಳಿಸಲು ಮಂಡಳಿಯನ್ನು ವಿನಂತಿಸುತ್ತೇವೆ. ಹಂಚಿಕೆ ಪತ್ರದ ಷರತ್ತು 8ರ ಪ್ರಕಾರ ಸಿಎ ನಿವೇಶನ ಸ್ವಯಂ ಪ್ರೇರಿತ ಶರಣಾಗತಿ ಎಂದು ಮಂಡಳಿಯು ಇದನ್ನು ಸ್ವೀಕರಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಂದಿನ ಹಂತಗಳ ಕುರಿತು ನಮಗೆ ಸಲಹೆ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
‘ಸಿಎ ನಿವೇಶನ ಬೇಡ ಎಂದು ಟ್ರಸ್ಟ್ ನ ಸದಸ್ಯ ರಾಹುಲ್ ಖರ್ಗೆ ಸೆ.20ರಂದು ಪತ್ರ ಬರೆದಿದ್ದಾರೆ. ಸಿಎ ನಿವೇಶನ ಪಡೆಯುವುದಕ್ಕೆ ನಾವು ಅರ್ಹರಿದ್ದೇವೆ, ಯಾವುದೇ ಅವ್ಯವಹಾರ ನಡೆದಿಲ್ಲ. ಇದು ಖಾಸಗಿ ಟ್ರಸ್ಟ್ ಅಲ್ಲ ಸಾರ್ವಜನಿಕ ಟ್ರಸ್ಟ್ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಟ್ರಸ್ಟ್ ಗೆ ಬಂದ ಹಣ ಯಾವುದೇ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎ ನಿವೇಶನದಲ್ಲಿ ಯಾವುದೇ ರಿಯಾಯತಿಯನ್ನು ಕೇಳಿಲ್ಲ. ಇದರಲ್ಲಿ ಯಾವುದೇ ಲಾಭದ ಉದ್ದೇಶವೂ ಇರಲಿಲ್ಲ. ಕೌಶಲ್ಯಾಭಿವೃದ್ಧಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಈ ನಿವೇಶನ ನೀಡಲಾಗಿತ್ತು. ಆದರೆ, ಬಿಜೆಪಿಯವರು ಹಲವು ಆರೋಪ ಮಾಡಿದರು. ವೈಯಕ್ತಿಕವಾಗಿ, ರಾಜಕೀಯ ಆರೋಪದಿಂದ ಬೇಸರವಾಗಿದೆ’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ