‘ಎಸ್‌ಐಟಿ’ ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ವಿಶೇಷ ತನಿಖಾ ತಂಡ: ಎಸ್. ಸುರೇಶ್ ಕುಮಾರ್ ಟೀಕೆ
ಬೆಂಗಳೂರು: ‘ವಿಶೇಷ ತನಿಖಾ ತಂಡ(ಎಸ್‌ಐಟಿ) ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ತನಿಖಾ ತಂಡ’ ಎಂದು ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್ ಟೀಕಿಸಿದರು.
ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ನಿಯಮ 69ರ ಅಡಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾದ ಪ್ರಕರಣ ವಿಚಾರ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಅವರು, ‘ಎಸ್‌ಐಟಿ ಎಂದರೆ ವಿಶೇಷ ತನಿಖಾ ತಂಡವಲ್ಲ. ಬದಲಾಗಿ, ಸಿಟ್ ಎಂದರೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ತನಿಖಾ ಸಂಸ್ಥೆಗಳು. ಇವು ಅವರ ಸೂಚನೆಯಂತೆ ನಡೆದುಕೊಳ್ಳುತ್ತಿವೆ ಎಂದು ಅವರು ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಒಂದು ತನಿಖಾ ಸಂಸ್ಥೆ ಮೇಲೆ ಆಧಾರ ರಹಿತ ಟೀಕೆ ಮಾಡುವುದು ಸರಿಯಲ್ಲ. ಇದನ್ನು ಕಡತದಿಂದ ತೆಗೆಯಬೇಕು’ ಎಂದು ಹೇಳಿದರು. ಈ ವೇಳೆ ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳಿಗೆ ನೀವು ಏನೆಂದು ಕರೆದಿದ್ದೀರಿ ಎಂದು ನಮಗೂ ಗೊತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದ ನಡೆಯಿತು.