ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಧೂಮಪಾನ: ಪ್ರಯಾಣಿಕನ ಬಂಧನ

Update: 2023-09-05 14:23 GMT

ಸಾಂದರ್ಭಿಕ ಚಿತ್ರ-  PTI

ಬೆಂಗಳೂರು, ಸೆ.5: ಕೋಲ್ಕತ್ತಾದಿಂದ ಬೆಂಗಳೂರು ನಗರಕ್ಕೆ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಪ್ರಯಾಣಿಕನನ್ನು ಜಿ.ಕರುಣಾಕರನ್ ಎಂದು ಗುರುತಿಸಲಾಗಿದೆ. ಈತನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಏರ್‍ಕ್ರಾಫ್ಟ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜಿ.ಕರುಣಾಕರನ್ ಸೆ.3ರ ರಾತ್ರಿ 9.11ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ 6ಇ 487 ವಿಮಾನದಲ್ಲಿ 24ಎ ಆಸನದಲ್ಲಿ ಕುಳಿತಿದ್ದರು. ಕೋಲ್ಕತ್ತಾದಿಂದ ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಲ್ಲಿ ಸುಡುವ ವಾಸನೆ ಬರುತ್ತಿರುವುದನ್ನು ಪ್ರಯಾಣಿಕರು ಗಮನಿಸಿದ್ದಾರೆ. ವಾಸನೆ ಶೌಚಾಲಯದಿಂದ ಹೊರಗಿನಿಂದ ಬರುತ್ತಿರುವುದಾಗಿ ತಿಳಿದುಬಂದಿದೆ. ಈ ವೇಳೆ ಬಾಗಿಲು ತ‌ಟ್ಟಿದ್ದಾರೆ. ಒಳಗಿದ್ದ ವ್ಯಕ್ತಿ ಬಾಗಿಲು ತೆಗೆದಿದ್ದು, ಕೈಯಲ್ಲಿ ಬೆಂಕಿ ಪೊಟ್ಟಣ ಇರುವುದು ಕಂಡು ಬಂದಿದೆ.

ಅಲ್ಲದೆ, ಶೌಚಾಲಯದೊಳಗೆ ಬೀಡಿಯನ್ನು ಫ್ಲಶ್ ಮಾಡುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಪ್ರಯಾಣಿಕರು ವಿಮಾನದ ಕ್ಯಾಪ್ಟನ್‍ಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ ಕೂಡಲೇ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News