ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ; ಆರೋಪ
ಬೆಂಗಳೂರು: ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವಂತೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಪತ್ರ ಬರೆದಿರುವ ಅವರು, ʼʼ ನಾನು ಈ ಹಿಂದೆ ಕೂಡ ಹಲವು ಬಾರಿ ಪೊಲೀಸ್ ಇಲಾಖೆಗೆ ರಕ್ಷಣೆ ಕೋರಿ ಮನವಿಯನ್ನು ಸಲ್ಲಿಸುತ್ತಲೇ ಬಂದಿದ್ದೇನೆ. ಗುಪ್ತಚರ ಇಲಾಖೆಯವರು ಎರಡು ಮೂರು ಬಾರಿ ನಮ್ಮ ಮನೆಗೆ ಆಗಮಿಸಿ ಹಲವಾರು ವಿವರಗಳನ್ನು ಕಲೆಹಾಕಿದ್ದಾರೆ. ನಂತರ ಮುಖ್ಯಮಂತ್ರಿಗಳ ಕಚೇರಿಯಿಂದಲೂ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದು, ಈವರೆಗೂ ನನಗೆ ಯಾವುದೇ ರೀತಿಯ ರಕ್ಷಣೆ ಒದಗಿಸಿಲ್ಲʼʼ ಎಂದು ದೂರಿದ್ದಾರೆ.
ʼʼಆಗಸ್ಟ್ 27 ರಂದು ರವಿವಾರ ಸಂಜೆ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಓರ್ವ ವ್ಯಕ್ತಿಯು ʼʼಇನ್ನು ಮುಂದೆ ಯಾವುದೇ ಪೋಸ್ಟ್ ಗಳನ್ನು ಹಾಕಿದರೆ ಎಚ್ಚರಿಕೆʼʼ ಎಂದೆಲ್ಲಾ ಉಲ್ಲೇಖಿಸಿ ಬೆದರಿಕೆ ಹಾಕಿದ್ದಾನೆ. ಆ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಿಸಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಅವರು ಒತ್ತಾಯಿಸಿದ್ದಾರೆ.
ʼʼಹಲವಾರು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಮತ್ತು ಸರ್ಕಾರಿ ಜಮೀನುಗಳನ್ನು ಅತಿಕ್ರಮ ಮಾಡಿಕೊಂಡವರ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಜನಪ್ರತಿನಿಧಿಗಳು ತಮ್ಮ ಆಸ್ತಿಗಳ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸದೆ, ಆದಾಯಕ್ಕೆ ಮೀರಿದ ಆಸ್ತಿಗಳನ್ನು ಮಾಡುವವರ ವಿರುದ್ಧ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ವಿಧಾನಸಭಾ ಸದಸ್ಯರ ವರೆಗೆ ಎಲ್ಲರ ಆಸ್ತಿಗಳ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಹೋರಾಟ ನಡೆಸಿ ಅದರಲ್ಲಿ ಜಯಗಳಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಷನ್, ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿಲ್ಲುವವರಿಗೆ ಈ ಆದೇಶದಿಂದ ಬಹಳಷ್ಟು ತೊಂದರೆ ಉಂಟಾಗಿದ್ದು ಬಹಳಷ್ಟು ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಹೋರಾಟವನ್ನು ನಿಲ್ಲಿಸುವ ಪ್ರಕ್ರಿಯೆ ನಡೆಸುತ್ತಲೇ ಇದ್ದಾರೆ.ಈ ಬಗ್ಗೆ ವಿವರವಾದ ದಾಖಲೆಗಳನ್ನು ಪೋಲಿಸ್ ಇಲಾಖೆಗೆ ಈ ಹಿಂದೆಯೇ ಸಲ್ಲಿಸಿದ್ದೇನೆʼʼ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ʼʼಈ ಎಲ್ಲಾ ಹಿನ್ನೆಲೆಯಲ್ಲಿ ವಾಟ್ಸಪ್ ಸಂದೇಶಗಳ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣ ಹಿಡಿದು ಬಂಧಿಸಬೇಕು ಮತ್ತು ನನಗೆ ಪೋಲಿಸ್ ರಕ್ಷಣೆಯನ್ನು ನೀಡಬೇಕು ಎಂದುʼʼ ವೆಂಕಟೇಶ್ ಒತ್ತಾಯಿಸಿದ್ದಾರೆ.