ನ್ಯಾಯಯುತ ಹಕ್ಕುಗಳನ್ನು ಪಡೆಯಲು ಈಡಿಗ ಸಮಾಜ ಸಂಘಟಿತವಾಗಬೇಕು: ಯೋಗೇಂದ್ರ ಗುರೂಜಿ ಅಭಿಮತ

Update: 2023-08-06 17:00 GMT

ಶಿವಮೊಗ್ಗ,ಆ.6: ಈಡಿಗ ಸಮುದಾಯ, ಸಾಕಷ್ಟು ಕಷ್ಟ ನೋಡಿದೆ. ನೊಂದು ಬೆಂದಿರುವ ಈ ಸಮುದಾಯಕ್ಕೆ ಇಂದು ದಾರಿದ್ರ್ಯ ಬಂದಿಲ್ಲ ಸಂಘಟನಾತ್ಮಕವಾಗಿ ನ್ಯಾಯವಾಗಿ ಧಕ್ಕಬೇಕಿರುವುದನ್ನು ಪಡೆಯಬೇಕಿದೆ. ಈ ನೆಲೆಯಲ್ಲಿ ಸಮಾಜ ಸಂಘಟನೆಯಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ ಹೇಳಿದರು.

ಶ್ರೀ ನಾರಾಯಣಗುರು ವಿಚಾರವೇದಿಕೆಯು ನಗರದ ಈಡಿಗ ಭವನದಲ್ಲಿ ಆಯೋಜಿಸಿದ್ದ ಚಿಂತನಮಂಥನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇಂದು ಈಡಿಗ ಸಮಾಜಕ್ಕೆ ಬಂದಿದೆ. ನಮ್ಮ ಜನಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದ ಹಲವು ಸಂಘಟನೆಗಳಿದ್ದು, ಎಲ್ಲವೂ ಅವರವರ ನೆಲೆಯಲ್ಲಿ ಸಮಾಜದ ಕೆಲಸ ಮಾಡುತ್ತಿದೆ. ಈಗ ಎಲ್ಲರನ್ನೂ ಒಗ್ಗೂಡಿಸಿ ಸರಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನ್ಯಾಯ ಪಡೆಯಬೇಕಿದೆ ಎಂದರು.

ಯುವಕರನ್ನು ಸಂಘಟಿಸಬೇಕು. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮುದಾಯದ ರಾಜಕೀಯ ನಾಯಕರು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರ ನಡುವೆ ಒಂದು ಸಮನ್ವಯ ಮೂಡಬೇಕಿದೆ. ನಮ್ಮ ನಡುವಿನ ಈರ್ಷೆ ತೊಲಗಬೇಕಿದೆ ಎಂದ ಯೋಗೇಂದ್ರ ಶ್ರೀ, ಚಿಂತನ ಮಂಥನ ಒಂದು ಪ್ರತಿ ಜಿಲ್ಲೆಯಲ್ಲಿ ನಡೆದು ಮುಂದೆ ಒಂದು ಹೋರಾಟವಾಗಲಿದೆ ಎಂದು ಹೇಳಿದರು.

ಸೋಲೂರು ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮುದಾಯದ ಎಲ್ಲಾ ಸ್ವಾಮೀಜಿಗಳ ನಡುವೆ ಒಂದು ಒಗ್ಗಟ್ಟು ಮೂಡಿದೆ. ಹಿಂದಿನ ಸರ್ಕಾರದ ಅವಧಿಯಿಂದಲೂ ನಮ್ಮ ಬೇಡಿಕೆ ಮಂಡಿಸಿದ್ದೇವೆ. ಅವುಗಳ ಅನುಷ್ಠಾನಕ್ಕೆ ಹೋರಾಟ ಮುಂದುವರಿಯಲಿದೆ. ಸಮಾಜದ ಜನರು ಹೆಚ್ಚು ವಿದ್ಯಾವಂತರಾಗಬೇಕು. ವಿಲಾಸಿ ಜೀವನದಿಂದ ಮುಕ್ತರಾಗಿ ಆರೋಗ್ಯಕರ ಸಮಾಜ ನಿರ್ಮಾಣದತ್ತ ಚಿತ್ತ ಹರಿಸಬೇಕೆಂದರು.

ನಿಪ್ಪಾಣಿಯ ಮಹಾಕಾಳಿ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ನಾರಾಯಣ ಗುರು ವಿಚಾರ ವೇದಿಕೆಯ ಸಾರಥ್ಯದಲ್ಲಿ ಐಕ್ಯತೆಯ ಹೋರಾಟ ನಡೆಬೇಕಿದೆ. ಸಮಾಜದ ದುರ್ಬಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ವ ಸಂಘಟನೆಗಳು ಶ್ರಮಿಸಬೇಕು. ಈಡಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಾಧೀಶರ ನಡುವೆ ಸಮನ್ವಯತೆ ಮೂಡಿದೆ ಎಂದು ಹೇಳಿದರು.

ಬೆಂಗಳೂರಿನ ಶಿ.ಗ ಫೌಂಡೇಷನ್ ಗುರುಮೂರ್ತಿ ಗುರೂಜಿ ಮಾತನಾಡಿ, ಸಮಾಜದ ಭಾವನೆಗಳು ಮತ್ತು ಚಿಂತನೆಗಳು ಬದಲಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮಾಜದ ಯುವಕರು ಸಂಸ್ಕಾರಯುತವಾದ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು. ಈ ಸಮಾಜದಲ್ಲಿ ಹುಟ್ಟಿದ ಮೇಲೆ ಈ ಜನರ ಸೇವೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾರಾಯಾಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಮಾತನಾಡಿ, ಶಿವಮೊಗ್ಗದಲ್ಲಿ ಹಿಂದೆ ಹಕ್ಕೊತ್ತಾಯ ಸಮಾವೇಶ ಮಾಡಿದಾಗ ಸಮಾಜದ ಐದು ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಲಾಗಿತ್ತು. ಅಂದು ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಿದ್ದು, ಮುಂದುವರಿದ ಚಟುವಟಿಕೆಗಳ ಈಗ ಆಗಬೇಕಿದೆ. ನೂತನ ಸರಕಾರದ ಮೇಲೆ ಒತ್ತಡ ಹೇರಲು ನಾವು ಏನು ಮಾಡಬೇಕೆಂಬ ಉದ್ದೇಶ ಮತ್ತು ಸಮಾಜದ ಸಂಘಟನೆಯ ದೃಷ್ಟಿಯಿಂದ ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದಿಂದ ಆಯ್ಕೆಯಾದ ಎಲ್ಲಾ ಶಾಸಕರು ಮತ್ತು ಸಚಿವರನ್ನು ಸನ್ಮಾನಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆ ಪ್ರಬಲವಾಗಿದ್ದು, ಧಾರ್ಮಿಕ ನಾಯಕರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಈಡಿಗ ಸಮಾಜದ 26 ಪಂಗಡಗಳ ಪ್ರಮುಖರು ಪಾಲ್ಗೊಂಡಿದ್ದರು. ಮಾಜಿ ಶಾಸಕರ ಡಾ.ಜಿ.ಡಿನಾರಾಯಣಪ್ಪ, ಸಂಶೋಧಕ ಮಧುಗಣಪತಿ ಮಡೆನೂರು, ಡಾ.ಮೋಹನ್ ಚಂದ್ರಗುತ್ತಿ, ಡಾ.ಅಣ್ಣಪ್ಪ ಮಳೀಮಠ್, ಪ್ರಮುಖರಾದ ಕಲಗೋಡು ರತ್ನಾಕರ್, ಕೆ.ಜಿ ಪ್ರಶಾಂತ್,ರಾಜನಂದಿನಿ ಕಾಗೋಡು, ‌‌ಸುರೇಶ್ ಬಾಳೇಗುಂಡಿ, ಸಿದ್ದಾಪುರದ ಎನ್.ಡಿ.ನಾಯ್ಕ್, ದೇವಪ್ಪ, ಮಮತೇಶ್ ಕಡೂರು, ಪ್ರೊ.ಕಲ್ಲನ, ಭುಜಂಗಯ್ಯ , ಎಸ್.ಎನ್.ಜಿ.ವಿ.ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ವಕೀಲರಾದ ಉಮೇಶ್ ಕೆ.ಎಲ್ ಶಿರಿಗಾರು, ರಾಘವೇಂದ್ರ ಸುಂಟ್ರಳ್ಳಿ, ದಿನೇಶ್ ಮಳಲಗದ್ದೆ, ಮೋಹನ್, ವೆಂಕಟೇಶ್ ನಾಯ್ಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಾನಸ ಹೆಬ್ಬೂರು ಕಾರ್ಯಕ್ರಮ ನಿರೂಪಿಸಿದರು. ಪ್ರಿಯ ಭಾಷಿಣಿ ಪ್ರಾರ್ಥಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು ಸ್ವಾಗತಿಸಿದರು.

ಈಡಿಗ ಸಮುದಾಯದ ಎಲ್ಲ ಉಪ ಪಂಗಡಗಳು ಒಂದಾಗಿವೆ. ಇನ್ನೂ ಬೇಡಿಕೆ ಈಡೇರಿಕೆಗೆ ಸಂಘಟಿತರಾಗಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಂಘಟನಾತ್ಮಕವಾಗಿ ಮುಂದೆ ಬಂದು ನ್ಯಾಯಯುತವಾಗಿ ಸಿಗಬೇಕಾದ ಬೇಡಿಕೆಗಳನ್ನು ಪಡೆಯಬೇಕು. ಸಮಾಜದ ಸಂಘಟನೆ ಸ್ವಾಮೀಜಿಗಳು ಒಂದಾಗಿರುವುದು ಸಂತೋಷದ ಸಂಗತಿ. ಸಮಾಜ ಸಂಘಟನೆ ಮತ್ತು ಸೇವಾ ಕಾರ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲುತ್ತೇವೆ

ಡಾ.ಎಸ್.ರಾಮಪ್ಪ, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News