ಕೆಲವು ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ: ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿದ ಬಳಿಕ ರೇಣುಕಾಚಾರ್ಯ ಹೇಳಿದ್ದೇನು?
ಬೆಂಗಳೂರು, ಸೆ. 9: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದಾಗಲೆಲ್ಲ ಬಿಜೆಪಿಗೆ ಹಾನಿಯಾಗಿದೆ. ಆದರೂ, ಕೆಲವರಿಗೆ ಇನ್ನೂ ಬುದ್ಧಿ ಬಂದಿಲ್ಲ’ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಬಿಎಸ್‍ವೈ ಕಡೆಗಣನೆ ಬಗ್ಗೆ ಆ ನಾಯಕರು ಬೇರೆಯವರಿಗೆ ನೀತಿ ಪಾಠ ಹೇಳುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ವಿರುದ್ಧ ಕಿಡಿಕಾರಿದರು.
ʼನಾನು ಆಕಾಂಕ್ಷಿʼ: ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದಿಂದ ಟಿಕೆಟ್ ಕೇಳಿದ್ದೇನೆ. ಟಿಕೆಟ್ ಕೊಡದಿದ್ದರೆ ಕಾದು ನೋಡುತ್ತೇನೆ. ಆಪ್ತರ ಜೊತೆ ಮುಂದೇನು ಮಾಡಬೇಕೆಂದು ಚರ್ಚಿಸುತ್ತೇನೆ. ಹಾಗಂತ ಕಾಂಗ್ರೆಸ್‍ನಲ್ಲಿ ಟಿಕೆಟ್ ಕೇಳಿಲ್ಲ, ಅವರೂ ನನ್ನ ಜತೆ ಚರ್ಚೆ ಮಾಡಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ನಿನ್ನೆ ನಡೆದ ಹೋರಾಟಕ್ಕೆ ಯಡಿಯೂರಪ್ಪ ನೇತೃತ್ವ ವಹಿಸಿದ್ದರು. ಲೋಕಸಭೆ ಚುನಾವಣೆಗೋಸ್ಕರ ಮಾತ್ರ ಯಡಿಯೂರಪ್ಪ ನಾಯಕತ್ವ ಬಯಸ್ತೀರಾ?. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ನಿರ್ಲಕ್ಷ್ಯ ಮಾಡಿದಿರಿ, ಅದಕ್ಕೆ ರಾಜ್ಯದ ಜನ ಉತ್ತರ ಕೊಟ್ಟಿದಾರೆ’ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ನಾಯಕತ್ವವನ್ನು ಕೇವಲ ಚುನಾವಣೆಗಾಗಿ ಬಳಕೆ ಮಾಡಬೇಡಿ. ಯಡಿಯೂರಪ್ಪ ಅವರಿಗೆ ಮತಗಳನ್ನು ಪರಿವರ್ತನೆ ಮಾಡುವ ಶಕ್ತಿ ಇದೆ. ಅವರು ಎಲ್ಲ ವರ್ಗಗಳ ನಾಯಕರು. ಚುನಾವಣೆಗೋಸ್ಕರ ತಂತ್ರಗಾರಿಕೆ ಮಾಡುವುದು ಸರಿಯಲ್ಲ ಎಂದು ಅವರು ದೂರಿದರು.