ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | ಶೇ.31.02ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

Update: 2024-07-10 13:56 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ 2024ರ ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶವು ಬುಧವಾರದಂದು ಪ್ರಕಟವಾಗಿದ್ದು, ಪರೀಕ್ಷೆ ಬರೆದವರ ಪೈಕಿ ಶೇ.31.02ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜೂ.14ರಿಂದ ಜೂ.22ರವರೆಗೆ ನಡೆದ ಈ ಪರೀಕ್ಷೆಯಲ್ಲಿ 2,23,293 ವಿದ್ಯಾರ್ಥಿಗಳು ಹಾಜರಾಗಿದ್ದು, 69,275 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಜೂ.26ರಿಂದ ಜೂ.30ರವರೆಗೆ 14 ಶೈಕ್ಷಣಿಕ ಜಿಲ್ಲೆಗಳ 85 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿದೆ. ಒಟ್ಟು 21,658 ಮೌಲ್ಯಮಾಪಕರು ಪಾಲ್ಗೊಂಡಿದ್ದರು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ಬಾಲಕಿಯರೇ ಮೇಲುಗೈ: 2024ರ ಎಸೆಸೆಲ್ಸಿ ಪರೀಕ್ಷೆ-2ರಲ್ಲಿ ಬಾಲಕರ ಫಲಿತಾಂಶವು ಶೇ.26.93ರಷ್ಟು ಇದ್ದು, ಬಾಲಕಿಯರ ಫಲಿತಾಂಶ ಶೇ.38.48ರಷ್ಟು ಇದೆ. ಪರೀಕ್ಷೆಯನ್ನು 1,44,153 ಬಾಲಕರು ಬರೆದಿದ್ದು, 38,820 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಪರೀಕ್ಷೆಯನ್ನು 79,140 ಬಾಲಕಿಯರು ಬರೆದಿದ್ದು, 30,455 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ.

ರಾಜ್ಯದಲ್ಲಿರುವ ಒಟ್ಟು 5,401 ಸರಕಾರಿ ಶಾಲೆಗಳ ಫಲಿತಾಂಶವು ಶೇ.29.43 ಇದ್ದು, 3,503 ಅನುದಾನಿತ ಶಾಲೆಗಳ ಫಲಿತಾಂಶವು ಶೇ.28.71, ಅನುದಾನರಹಿತ ಶಾಲೆಗಳ ಫಲಿತಾಂಶವು ಶೇ.38.21ರಷ್ಟು ಇದೆ. ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶವು ಶೇ.31.17ರಷ್ಟು, ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶವು ಶೇ.30.93ರಷ್ಟು ಇದೆ.

ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶವು ಇತರೆ ಮಾಧ್ಯಮಗಳ ವಿದ್ಯಾರ್ಥಿಗಳ ಫಲಿತಾಂಶಕ್ಕಿಂತ ಹೆಚ್ಚಾಗಿದ್ದು, ಶೇ.40.39ರಷ್ಟು ಫಲಿತಾಂಶ ದಾಖಲಾಗಿದೆ. ಕನ್ನಡ ಮಾಧ್ಯಮಗಳ ವಿದ್ಯಾರ್ಥಿಗಳ ಫಲಿತಾಂಶವು ಶೇ.27.68, ಉರ್ದು ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶವು ಶೇ.36.49, ಮರಾಠಿ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಶೇ.30.01, ತೆಲುಗು ವಿದ್ಯಾರ್ಥಿಗಳ ಫಲಿತಾಂಶ ಶೇ.22.64ರಷ್ಟು, ತಮಿಳು ವಿದ್ಯಾರ್ಥಿಗಳ ಫಲಿತಾಂಶ ಶೇ.29.41, ಹಿಂದಿ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶವು ಶೇ.35.02ರಷ್ಟು ಇದೆ.

ಮರುಮೌಲ್ಯಮಾಪನ: ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು.15ರವರೆಗೆ, ಅರ್ಜಿ ಸಲ್ಲಿಸಿದರು ಶುಲ್ಕ ಪಾವತಿ ಮಾಡಲು ಜು.16ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆಗೆ ಹಾಗೂ ಮರುಮೌಲ್ಯಮಾಪನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು.13ರಿಂದ ಜು.18ರವರೆಗೆ ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಿದವರು ಶುಲ್ಕವನ್ನು ಪಾವತಿ ಮಾಡಲು ಜು.19ರವರೆಗೆ ಅವಕಾಶ ನೀಡಲಾಗಿದೆ.

ಎಸೆಸೆಲ್ಸಿ ಪರೀಕ್ಷೆ-3ಕ್ಕೆ ನೋಂದಣಿ: 2024ರ ಎಸೆಸೆಲ್ಸಿ ಪರೀಕ್ಷೆ-3ಕ್ಕೆ ನೋಂದಣಿ ಮಾಡಿಕೊಳ್ಳಲು ಜು.17ರವರೆಗೆ ಅವಕಾಶ ನೀಡಲಾಗಿದೆ. ಎಸೆಸೆಲ್ಸಿ ಪರೀಕ್ಷೆ-3ನ್ನು ಆ.2ರಿಂದ ಆ.9ರವರೆಗೆ ನಡೆಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News