ಬೆಂಗಳೂರು ದಕ್ಷಿಣ ಭಾಗದಲ್ಲಿ 2ನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ | ಸಿಎಂ, ಡಿಸಿಎಂಗೆ ಶಾಸಕರ ಮನವಿ

Update: 2024-10-22 16:18 GMT

ಬೆಂಗಳೂರು : ರಾಜಧಾನಿ ಬೆಂಗಳೂರು ದಿನೇ ದಿನೇ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇರುವ ಪ್ರಮುಖ ಬೇಡಿಕೆಯಾದ 2ನೇ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‍ಗೆ ಪತ್ರ ಬರೆಯುವ ಮೂಲಕ ರಾಮನಗರ, ಮಂಡ್ಯ ಹಾಗೂ ಮೈಸೂರು ಭಾಗದ ಜನಪ್ರತನಿಧಿಗಳ ತಂಡವು ಮನವಿ ಮಾಡಿದೆ.

ಎರಡನೇ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ ಈ ಭಾಗದ ಜನತೆಗೆ ಅನುಕೂಲವಾಗುವುದರ ಜೊತೆಗೆ ಬೆಂಗಳೂರು ದಕ್ಷಿಣ ಭಾಗವೂ ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಪಿ.ಎಂ.ನರೇಂದ್ರಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಪಿ.ರವಿಕುಮಾರ್, ಶಿವಣ್ಣ, ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ, ಪುಟ್ಟಣ್ಣ ಅವರ ತಂಡವು 2ನೇ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಏನಿದೆ?: ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಬನ್ನೇರುಘಟ್ಟ ರಸ್ತೆ, ಜಯನಗರ, ಜೆ.ಪಿ.ನಗರ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಂಪೇಗೌಡ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿರುವುದರಿಂದ ಉದ್ದೇಶಿತ ಎರಡನೇ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ, ಈ ಭಾಗದ ಜನತೆಗೆ ಅನುಕೂಲವಾಗುವುದರ ಜೊತೆಗೆ, ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಯಾಣಿಕರ ಸಂಚಾರಕ್ಕಾಗಿ ಮೆಟ್ರೋ ಸಂಪರ್ಕವಿದೆ. ಎಲೆಕ್ಟ್ರಾನಿಕ್ ಸಿಟಿ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸಿರುವುದರ ಜೊತೆಗೆ ನೈಸ್ ರಸ್ತೆಯಂತಹ ಹೊರವಲಯದ ರಸ್ತೆ ಕೂಡ ಇರುವುದರಿಂದ ಸಂಚಾರ ದಟ್ಟಣೆ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಈ ಭಾಗದಲ್ಲಿ ಕಾವೇರಿ, ಅರ್ಕಾವತಿ ನದಿ ಜೊತೆಗೆ ಕಣ್ವ, ಮಂಚನಬೆಲೆ, ಜಲಾಶಯಗಳಿರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರುವುದಿಲ್ಲ. ಇದರ ಜೊತೆಗೆ ಬೆಂಗಳೂರು ದಕ್ಷಿಣ ಭಾಗದ ಭೂಪ್ರದೇಶ ಸಮತಟ್ಟಗಾಗಿದೆ. ರನ್ ವೇ ನಿರ್ಮಾಣಕ್ಕೆ ಕನಿಷ್ಠ 3-5 ಕಿ.ಮೀ.ನಷ್ಟು ಉದ್ದದ ಸಮತಟ್ಟು ಭೂಮಿಯ ಅವಶ್ಯಕತೆ ಇರುವುದರಿಂದ 2ನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೆಂಗಳೂರು ದಕ್ಷಿಣ ಭಾಗ ಸೂಕ್ತ ಪ್ರದೇಶವಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಬೆಂಗಳೂರು ನಗರದ ನಂತರದಲ್ಲಿ ಎರಡನೇ ಐಟಿ ನಗರವಾಗಿ ಮೈಸೂರು ನಗರ ಹೊರಹೊಮ್ಮುತ್ತಿದೆ. ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಮೈಸೂರಿಗೆ ಬೆಂಗಳೂರಿನಿಂದ ಸಂಚರಿಸುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಪ್ರಯಾಣಿಕರ ಸಂಚಾರಕ್ಕೆ ವರದಾನವಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದ ನಂತರ ರಾಮನಗರ, ಚನ್ನಪಟ್ಟಣ, ಮದ್ದೂರು ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ ಎಂದು ಅವರು ತಿಳಿಸಿದ್ದಾರೆ.

ಕಾವೇರಿ ನದಿ ತಪ್ಪಲಿನ ಈ ಭಾಗದಲ್ಲಿ ನೀರಿನ ಸೌಕರ್ಯ ಕೂಡ ಚೆನ್ನಾಗಿದೆ. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಹೈಟೆಕ್ ಆಸ್ಪತ್ರೆ, ಸ್ಟಾರ್ ಹೋಟೆಲ್, ರೆಸಾರ್ಟ್ ಗಳನ್ನು ಒಳಗೊಂಡಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಸುಸಜ್ಜಿತ ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳಿವೆ. ಎರಡನೇ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು ರಸ್ತೆಯಲ್ಲಿ ಮಾಡಿದರೆ ಸೂಕ್ತವಾಗಿರಲಿದೆ ಎಂದು ಶಾಸಕರು ಹೇಳಿದ್ದಾರೆ.

ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು. ಅಲ್ಲದೇ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂದು ಶಾಸಕರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News