ರಾಜ್ಯವು ಜಾಗತಿಕ ಅನಿಮೇಷನ್-ಗೇಮಿಂಗ್ ನಾಯಕತ್ವದ ಗುರಿ ಹೊಂದಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಎವಿಜಿಸಿ-ಎಕ್ಸ್ ಆರ್ ತಂತ್ರಜ್ಞಾನಗಳಲ್ಲಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ನಾಯಕನನ್ನಾಗಿ ಮಾಡಲು, ಎವಿಜಿಸಿ-ಸಂಬಂಧಿತ ಕೌಶಲ್ಯಗಳ ಉತ್ಕೃಷ್ಟತೆಯ ಕೇಂದ್ರವಾಗಿ ರಾಜ್ಯವನ್ನು ಪರಿವರ್ತಿಸುವ ಮೂಲಕ ದೃಢವಾದ ಪ್ರತಿಭಾ ಪೂಲ್ ಅನ್ನು ಸೃಷ್ಟಿಸಲು ನಾವು ಯೋಜಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಐಟಿ-ಬಿಟಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಎಎಫ್‍ಎಕ್ಸ್ ಸಮ್ಮೇಳನದ 5ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2028ರ ವೇಳೆಗೆ ಈ ವಲಯದಲ್ಲಿ 30 ಸಾವಿರ ಹೊಸ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದರು.
ವಲಯದ ಒಟ್ಟು ಆದಾಯದಲ್ಲಿ ರಫ್ತುಗಳು ಕನಿಷ್ಠ ಶೇ.80ರಷ್ಟು ಇರುವುದನ್ನು ಖಚಿತಪಡಿಸಲಾಗುತ್ತದೆ ಹಾಗೂ ಎವಿಜಿಸಿ ಉದ್ಯಮದಲ್ಲಿ ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ತಂತ್ರಜ್ಞಾನ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕವು ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ. ಐಟಿ ಮತ್ತು ಐಟಿ-ಶಕ್ತಗೊಂಡ ಸೇವಾ ಉದ್ಯಮಗಳನ್ನು ಮೊದಲು ಮುನ್ನಡೆಸಿದ ಕೀರ್ತಿ ನಮ್ಮದು ಎನ್ನುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಶೇ.20ರಷ್ಟಿದೆ. 15ಸಾವಿರಕ್ಕೂ ಹೆಚ್ಚು ವೃತ್ತಿಪರರಿಗೆ ಇದು ಉದ್ಯೋಗ ನೀಡಿದೆ. ಹಾಗೂ 300ಕ್ಕೂ ಹೆಚ್ಚು ವಿಶೇಷ ಎವಿಜಿಸಿ-ಎಕ್ಸ್ ರೇ ಸ್ಟುಡಿಯೋಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಜಿಎಎಫ್‍ಎಕ್ಸ್ ಈ ಉದ್ಯಮವನ್ನು, ಪ್ರಚಾರ ಮಾಡುವ ಮತ್ತು ಪ್ರದರ್ಶಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಇದು ಜಾಗತಿಕ ಉದ್ಯಮಕ್ಕೆ ಎಂಜಿನ್ ರೂಮ್ ಆಗಿ ಕಾರ್ಯನಿರ್ವಹಿಸುತ್ತಿದೆ. 2021ರಲ್ಲಿ ಭಾರತದ ನಾಮಮಾತ್ರದ ಜಿಡಿಪಿ ಶೇ.19ರಷ್ಟು ಬೆಳೆದಾಗ, ಜಾಹೀರಾತು ಬೆಳವಣಿಗೆಯು ಶೇ.25ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಅತ್ಯಧಿಕ ಬೆಳವಣಿಗೆ ದೂರದರ್ಶನ ಜಾಹೀರಾತಿನಲ್ಲಿ ಅಂದರೆ ಶೇ.62ರಷ್ಟು ಕಂಡುಬಂದಿದೆ. ನಂತರದ ಸ್ಥಾನದಲ್ಲಿ ಡಿಜಿಟಲ್ ಜಾಹೀರಾತು 55 ಬಿಲಿಯನ್ ರೂ. ಮತ್ತು 29 ಬಿಲಿಯನ್ ರೂ.ಗಳು ಪುಟಿದೇಳಬಲ್ಲ ಮುದ್ರಣದಿಂದ ಕಂಡುಬಂದಿದೆ. ಭಾರತವು ವಿಶ್ವದ ಅತಿದೊಡ್ಡ ಕಂಟೆಂಟ್ ಉತ್ಪಾದಕರಲ್ಲಿ ಒಂದಾಗಿದೆ. 150 ಸಾವಿರ ಗಂಟೆಗಳ ಟಿವಿ ಕಂಟೆಂಟ್, 2,500 ಗಂಟೆಗಳ ಪ್ರೀಮಿಯಂ ಒಟಿಟಿ ಕಂಟೆಂಟ್ ಮತ್ತು 2021ರಲ್ಲಿ 2 ಸಾವಿರ ಗಂಟೆಗಳ ಚಿತ್ರೀಕರಿಸಿದ ಕಂಟೆಂಟ್ ಸೃಷ್ಟಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಡಿಜಿಟಲ್ ಮಾಧ್ಯಮವು ಎರಡನೆ ಅತಿ ದೊಡ್ಡ ವಲಯವಾಗಿ ತನ್ನನ್ನು ದೃಢವಾಗಿ ಸ್ಥಾಪಿಸಿಕೊಂಡಿದೆ ಮತ್ತು ಇದು 2021 ರಲ್ಲಿ 68 ಬಿಲಿಯನ್ ರೂ.ಗಳಷ್ಟು ಅಭಿವೃದ್ಧಿಯನ್ನು ಕಂಡಿದೆ. ರಾಜ್ಯ ಸರಕಾರವು ಕರಡು ಜೈವಿಕ ತಂತ್ರಜ್ಞಾನ ಮತ್ತು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ ನೀತಿಯನ್ನು ಕಳೆದ ಸಾಲಿನ ನವೆಂಬರ್ ರಲ್ಲಿ ಬಿಡುಗಡೆ ಮಾಡಿದೆ. ಇದು ಪ್ರತಿಯೊಂದು ವಲಯದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ರಾಜ್ಯದ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಉದ್ಯಮಗಳಲ್ಲಿನ ಜಾಗತಿಕ ಮತ್ತು ರಾಷ್ಟ್ರೀಯ ಬೆಳವಣಿಗೆಯನ್ನು ಗುರುತಿಸಿ, ಎವಿಜಿಸಿ-ಎಕ್ಸ್‍ಆರ್ ನಲ್ಲಿ ರಾಜ್ಯವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸಲು ಐಟಿ ಮತ್ತು ಬಿಪಿಎಂ ನಲ್ಲಿ ಕರ್ನಾಟಕದ ಅಸ್ತಿತ್ವದಲ್ಲಿರುವ ಸಾಮಥ್ರ್ಯಗಳನ್ನು ನಿಯಂತ್ರಿಸುವ ಗುರಿಯನ್ನು ನೀತಿಯು ಹೊಂದಿದೆ ಎಂದು ಅವರು ತಿಳಿಸಿದರು.
ಈ ನೀತಿಯು ಸ್ಥಳೀಯ ಹಾಗೂ ಜಾಗತಿಕ ಅಗತ್ಯಗಳನ್ನು ಪೂರೈಸುವುದಲ್ಲದೆ ಅನಿಮೇಷನ್ ಗೆ ಶೈಕ್ಷಣಿಕ ಸಂಸ್ಥೆಗಳ ಸಮರ್ಪಣೆ, ವಿಷುಯಲ್ ಎಫೆಕ್ಟ್ಸ್ ಹಾಗೂ ಗೇಮಿಂಗ್ ಗಳ ಬಗ್ಗೆ ಗಮನಹರಿಸಿದೆ. ಈ ವಿಶೇಷ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಭಾರತದ 139 ಸಂಸ್ಥೆಗಳ ಬೃಹತ್ ಪಾಲನ್ನು ಹೊಂದಿದೆ. ರಾಜ್ಯದ 27 ಲಲಿತ ಕಲಾ ಕಾಲೇಜುಗಳಲ್ಲಿ 600 ವಿದ್ಯಾರ್ಥಿಗಳಿಗೆ ಡಿಜಿಟಲ್ ಆರ್ಟ್ ಸೆಂಟರ್ ಗಳು ಹಾಗೂ ಒಂದು ಎವಿಜಿಸಿ-ಎಕ್ಸ್ ಆರ್ ಫಿನಿಶಿಂಗ್ ಶಾಲೆಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಉತ್ಕೃಷ್ಟತಾ ಕೇಂದ್ರ ಮತ್ತು ದೇಶದ ಮೊದಲ ಸ್ಟೇಟ್ ಆಫ್ ಆರ್ಟ್ ಸೌಲಭ್ಯ ಕೇಂದ್ರದಲ್ಲಿ ಸುಸಜ್ಜಿತ ಎವಿಸಿಜಿ ಪೊಸ್ಟ್-ಪ್ರೊಡಕ್ಷನ್ ಲ್ಯಾಬ್, ಉದ್ಯಮಕ್ಕೆ ಶಿಕ್ಷಣ ಮತ್ತು ಉತ್ತಮ ಗುಣಮಟ್ಟದ ವಿಷಯವನ್ನು ಉತ್ಪಾದಿಸಲು ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಕೇಂದ್ರವು ಕರ್ನಾಟಕದಲ್ಲಿ ಎವಿಜಿಸಿ ಕಂಪೆನಿಗಳಿಗೆ ಹೆಚ್ಚು ನುರಿತ ಸೃಜನಶೀಲ ತಂತ್ರಜ್ಞರು ಮತ್ತು ತಂತ್ರಜ್ಞರಿಗೆ ತರಬೇತಿ ನೀಡಲು ಮತ್ತು ತಂತ್ರಜ್ಞರನ್ನು ಒದಗಿಸಲು ಫಿನಿಶಿಂಗ್ ಸ್ಕೂಲ್ ಅನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.