ಮಹಿಳೆಯರ ಕುರಿತ ಹೇಳಿಕೆ | ಎಚ್‌ಡಿಕೆಗೆ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆ

Update: 2024-04-19 10:47 GMT

ಬೆಂಗಳೂರು: "ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ" ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿ ಹೇಳಿಕೆ ಸಂಬಂಧ ರಾಜ್ಯ  ಮಹಿಳಾ ಆಯೋಗ ಕುಮಾರಸ್ವಾಮಿಗೆ ನೋಟಿಸ್ ನೀಡಿದ್ದು, ಇದೀಗ ಈ ನೋಟಿಸ್ ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಮಹಿಳಾ ಆಯೋಗದ ನೋಟಿಸ್ ಗೆ ತಡೆ ನೀಡಿದೆ. ಅಲ್ಲದೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿ ವಿಚಾರಣೆ ವೇಳೆ ಎಚ್.ಡಿ.ಕುಮಾರಸ್ವಾಮಿ ಪರ ವಕೀಲರು ವಾದ ಮಂಡಿಸಿ, ದೂರುಗಳಿಲ್ಲದಿದ್ದರೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಸ್ವತಃ ಅಧ್ಯಕ್ಷೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಿದ್ದಾರೆ. ಸೆಕ್ಷನ್ 7 ಗೆ ವಿರುದ್ಧವಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನೋಟಿಸ್ ನೀಡಿದ್ದಾರೆ ಎಂದು ಅವರು ಕೋರ್ಟ್ ವಿವರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಹಿಳಾ ಆಯೋಗ ಕಾರಣ ಕೇಳಿ ನೋಟಿಸ್ ನೀಡಿಲ್ಲ, ಸಮನ್ಸ್ ನೀಡಿಲ್ಲ. ಸ್ಷಷ್ಟೀಕರಣ ನೀಡಿ ಇಲ್ಲವಾದರೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಕ್ರಮ ವ್ಯಾಪ್ತಿ ಮೀರಿದಂತಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಎಚ್.ಡಿ.ಕುಮಾರಸ್ವಾಮಿಗೆ ನೀಡಿದ್ದ ನೋಟಿಸ್ ಗೆ ತಡೆಯಾಜ್ಞೆ ನೀಡಿ ಆದೇಶಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News