ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

Update: 2023-09-17 17:36 GMT

ಬೆಂಗಳೂರು, ಸೆ.17: ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕಾಗುತ್ತದೆ. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು ಅನುದಾನ ಹೆಚ್ಚು ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಕವಿ ಕುವೆಂಪು ಹೇಳುವಂತೆ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ. ನಾವು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಧರ್ಮ, ಧರ್ಮಗಳ ನಡುವೆ ಸಂಘರ್ಷ, ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಧರ್ಮ ಬದುಕಿನ ಮಾರ್ಗ. ಮನುಷ್ಯನ ಬದುಕಿಗಾಗಿ ಧರ್ಮವಿದೆ. ಯಾವ ಧರ್ಮ ಮನುಷ್ಯನನ್ನು ದ್ವೇಷಿಸುತ್ತದೆಯೋ ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಹಿಂದುಳಿದ ಜಾತಿಗಳ ಜಯಂತಿ ಹಾಗೂ ನಿಗಮಗಳನ್ನೂ ರಚನೆ ಮಾಡಲು ತೀರ್ಮಾನ ಮಾಡಿ ಹಣವನ್ನೂ ಒದಗಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಯಾ ಜಾತಿಯವರೇ ತಮ್ಮ ಜಯಂತಿಗಳನ್ನು ಆಚರಣೆ ಮಾಡಿದರೆ ಜಾತಿ ಬಣ್ಣ ಬರುತ್ತದೆ. ಸರಕಾರ ಮಾಡಿದರೆ ಜಾತಿ ಬಣ್ಣ ಬರುವುದಿಲ್ಲ. ನಾವು ಸರ್ವರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡುವುದರಲ್ಲಿ ನಂಬಿಕೆವುಳ್ಳವರು. ಕೆಲವೇ ಜಾತಿಗಳ ಸಮಾಜ ನಿರ್ಮಾಣವಾಗಬಾರದು. ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅನಾದಿ ಕಾಲದಿಂದಲೂ ನೈಪುಣ್ಯತೆ, ಕೌಶಲ್ಯವಿದ್ದರೂ ಆರ್ಥಿಕವಾಗಿ ಸಬಲರಲ್ಲ. ಸಬಲರಾಗಲು ಆರ್ಥಿಕ, ಸಾಮಾಜಿಕ ರಾಜಕೀಯ ಅವಕಾಶಗಳು ಸಿಗಬೇಕು. ಇಲ್ಲದಿದ್ದರೆ ಯಾವ ಜಾತಿಯೂ ಮೇಲೆ ಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸಂವಿಧಾನದ ವಿರುದ್ಧ ಇರುವವರ ಬಳಿ ಅಧಿಕಾರ ಇದ್ದರೆ ಸಾಧ್ಯವಿಲ್ಲ. ಬಹುತ್ವದ ಸಮಾಜ ಉಳ್ಳ ನಾವು ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಒಂದು ಧರ್ಮ ಆಧಾರಿತ ದೇಶವಲ್ಲ ಇದು. ಒಂದು ಜಾತಿ, ಭಾಷೆ ಆಧಾರಿತ ದೇಶವಲ್ಲ. ಸಹಿಷ್ಣುತೆ, ಸಹಬಾಳ್ವೆ ಎಂದು ಸಂವಿಧಾನ ಹೇಳುತ್ತದೆ ಎಂದು ಅವರು ಹೇಳಿದರು.

ಶಿಕ್ಷಣ ಪಡೆಯದಿದ್ದರೆ ಸಮಾಜ ಮುಂದುವರೆಯುವುದಿಲ್ಲ. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದ್ದು, ಅದಕ್ಕೆ ಚಲನೆ ಇಲ್ಲ. ಸಾಮಾಜಿಕ ವ್ಯವಸ್ಥೆಗೆ ಆರ್ಥಿಕ, ಸಮಾಜಿಕ ಶಕ್ತಿ ಇಲ್ಲದಿದ್ದರೆ, ವ್ಯವಸ್ಥೆ ಬದಲಾಗುವುದಿಲ್ಲ. ಇದು ಬಂದಾಗ ಮಾತ್ರ ಚಲನೆ ಸಾಧ್ಯ. ಬದಲಾವಣೆಗೆ ವಿರುದ್ಧ ಇರುವವರು ಸಾಮಾಜಿಕ ವೈರಿಗಳು ಎಂದು ಸಿದ್ದರಾಮಯ್ಯ ತಿಳಿಸಿದರು.

ʼʼಸರಕಾರ ಆಚರಿಸುವ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಹಿಂದೇಟು ಹಾಕುವುದಿಲ್ಲ. ಸರಕಾರದ ವತಿಯಿಂದ ಜನಾಂಗದ ಕಾರ್ಯಕ್ರಮ ಆಚರಿಸಿದರೆ ಹೆಚ್ಚು ಮಹತ್ವ ಇರುತ್ತದೆ. ಹಾಗಾಗಿ ಸರಕಾರವೇ ಅನೇಕ ಹಿಂದುಳಿದ ಜಯಂತ್ಯೋತ್ಸವವನ್ನು ಆಚರಣೆ ಮಾಡುತ್ತಿದೆʼʼ

-ಸಿದ್ದರಾಮಯ್ಯ, ಮುಖ್ಯಮಂತ್ರಿ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News