ಕಾನೂನು ಕಾಲೇಜುಗಳ ಪ್ರವೇಶ ಸೀಟು ಹೆಚ್ಚಳಕ್ಕೆ ಕ್ರಮ: ಎಚ್.ಕೆ.ಪಾಟೀಲ್

Update: 2023-12-12 13:09 GMT

ಬೆಳಗಾವಿ: ‘ಹಾಸನ ಜಿಲ್ಲೆ ಹೊಳೇನರಸೀಪುರ ಸರಕಾರಿ ಕಾನೂನು ಕಾಲೇಜು ಸೇರಿದಂತೆ ರಾಜ್ಯದಲ್ಲಿರುವ ನಾಲ್ಕೈದು ಕಾನೂನು ಕಾಲೇಜುಗಳಲ್ಲಿ ಪ್ರವೇಶಕ್ಕೆ ಸೀಟುಗಳ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರದ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಹೊಳೆನರಸೀಪುರ ಕಾಲೇಜು ಉತ್ತಮವಾಗಿ ನಡೆಯುತ್ತಿದೆ. 5 ವರ್ಷದ ಎಲ್‍ಎಲ್‍ಬಿ ಕೋರ್ಸಿಗೆ 139, ಮೂರು ವರ್ಷದ ಕೋರ್ಸಿಗೆ 381 ಅರ್ಜಿಗಳು ಬಂದಿವೆ. ಇದನ್ನು ದುಪ್ಪಟ್ಟುಗೊಳಿಸಬೇಕೆಂದು ರೇವಣ್ಣ ಒತ್ತಾಯಿಸುತ್ತಿದ್ದಾರೆ. 15 ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅದರ ಅನುಸಾರ ಕಾನೂನು ವಿವಿ ಸ್ಥಳ ಪರಿಶೀಲನೆ ಮಾಡಿದೆ. ವರದಿ ಸಲ್ಲಿಕೆ ಮಾಡಲಿದ್ದು, ಆ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಲೇಜಿನ ಎರಡು ಕೋರ್ಸಿನ ಪ್ರವೇಶಾತಿಗಾಗಿ ಹೊಸದಿಲ್ಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ಸೀಟುಗಳ ವಿಷಯದಲ್ಲಿ ರಾಜ್ಯ ಸರಕಾರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಪೂರ್ವಾನುಮತಿ ಬೇಕಿದೆ ಎಂದು ಅವರು ಸ್ಪಷ್ಟಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News