ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2023-09-23 13:33 GMT

ಮಂಡ್ಯ, ಸೆ.23: ರಾಜ್ಯ ಸರಕಾರ ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದರಿಂದ ನ್ಯಾಯಾಂಗ ನಿಂದನೆ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಶನಿವಾರ ಬೆಂಬಲ ನೀಡಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದಿದ್ದರೆ ನ್ಯಾಯಾಂಗ ಉಲ್ಲಂಘನೆ ಆಗುವುದಿಲ್ಲ ಎಂದು ಪ್ರತಿಪಾದಿಸಿದರು.

ಆಂಧ್ರಪ್ರದೇಶ ಮತ್ತು ಜ್ಞಾನಿಚಂದ್ ನಡುವಿನ ವ್ಯಾಜ್ಯದ ಪ್ರಕರಣ ಸಂಬಂಧ 2016ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖ ಮಾಡಿದ ಅವರು, ಕೋರ್ಟ್ ಆದೇಶ ಪಾಲನೆ ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಆ ಆದೇಶವನ್ನು ಪಾಲನೆ ಮಾಡದಿದ್ದರೆ ಅದು ನ್ಯಾಯಾಂಗ ಉಲ್ಲಂಘನೆ ಆಗುವುದಿಲ್ಲ ಎಂದು ತಿಳಿಸಿದರು.

ಸರಕಾರ ಈಗಲಾದರೂ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಲಿ, ನಾವು ಸರಕಾರಕ್ಕೆ ಬೆಂಬಲವಾಗಿ ಇರುತ್ತೇವೆ. ಒಂದು ವೇಳೆ ಸರಕಾರ ಬಿದ್ದೇ ಹೋದರೂ ನ್ಯಾವ್ಯಾರೂ ಚುನಾವಣೆಗೆ ಹೋಗದೆ ಇರೋಣ. ಅದೇನು ಆಗುತ್ತೋ ಆಗಲಿ ಎಂದು ಅವರು ತಾಕೀತು ಮಾಡಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಸಮಿತಿ ಮತ್ತು ಪ್ರಾಧಿಕಾರದ ಎದುರು ರಾಜ್ಯ ಸರಕಾರ ವಾಸ್ತವಾಂಶಗಳನ್ನು ಮಂಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿರುವ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಎಲ್ಲ ನಿವೃತ್ತ ನ್ಯಾಯಮೂರ್ತಿಗಳನ್ನು ಕರೆದು ಚರ್ಚೆ ಮಾಡಬೇಕು. ಆ ಮೂಲಕ ಇರುವ ನೀರನ್ನಾದರೂ ಉಳಿಸಿಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವಾಸ್ತವ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳದೆ ಎಸಿ ರೂಂನಲ್ಲಿ ಕುಳಿತು ಆದೇಶ ನೀಡಿದೆ ಎಂದು ಟೀಕಿಸಿದ ಅವರು, ರಾಜ್ಯ ಸರಕಾರವೂ ಪ್ರಾಧಿಕಾರದ ಮುಂದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಸಿಡಬ್ಲ್ಯೂಎಂಎ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ದೂರಿನ ವಿರುದ್ಧ ತಕರಾರು ಅರ್ಜಿ ಸಲ್ಲಿಸಿ, ತೀರ್ಪು ಬರುವವರೆಗೂ ನೀರು ಬಿಡಬೇಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ, ಸರಕಾರ ಕೇಳಲಿಲ್ಲ, ನೀರು ಹರಿಸಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಲಸಂಪನ್ಮೂಲ ಸಚಿವರು ಸ್ವಲ್ಪ ದಿನಗಳ ಅವಧಿಗೆ ಬೆಂಗಳೂರಿನ ಕಡೆಗಿನ ಗಮನವನ್ನು ಬದಿಗಿರಿಸಿ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಹೋರಾಟವನ್ನು ನಿಲ್ಲಿಸಿದರೆ ಸರಕಾರ ಲಘುವಾಗಿ ಪರಿಗಣಿಸಿಬಿಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೋರಾಟವನ್ನು ನಿಲ್ಲಿಸಬಾರದು. ಬೆಂಗಳೂರಿನಲ್ಲೂ ಹೋರಾಟ ಭುಗಿಲೆದ್ದಿದೆ. ಕಾವೇರಿ ಹೋರಾಟಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಅವರು ಭರವಸೆ ನೀಡಿದರು.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಸಿಕಿಸಿಕೊಡುವಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ತನ್ನ ಸರಕಾರ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ರಾಜ್ಯದ ಹಿತವನ್ನು ಕಾಪಾಡಿದೆ. ಈ ಇಳಿವಯಸ್ಸಿನಲ್ಲೂ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೊಂಡರು.

ಶಾಸಕರಾದ ಜಿ.ಟಿ.ದೇವೇಗೌಡ, ಮುನಿರತ್ನ, ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್‍ಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎಂ.ಎಸ್.ಆತ್ಮಾನಂದ, ಜಿ.ಬಿ.ಶಿವಕುಮಾರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಎಚ್.ಡಿ.ಕುಮಾರಸ್ವಾಮಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜೆಡಿಎಸ್‍ನ ಮಾಜಿ ಶಾಸಕರು ಇದ್ದರು.

“ರೈತರು ಸಾಲಕ್ಕೆ ಹೆದರಿ ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗುವ ಯತ್ನ ಮಾಡಬಾರದು. ನಿಮ್ಮ ಸಾಲವನ್ನು ತೀರಿಸುವ ಕಾಲವನ್ನು ದೇವರು ಮುಂದೆ ನಮಗೆ ನೀಡಲಿದ್ದಾನೆ. ನಾಡಿನ ಜನರನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಸಮಸ್ಯೆಗೆ ಪರಿಹಾರ ಕೊಡುವವರೆಗೂ ನಾನು ಭೂಮಿ ಒಳಗೆ ಹೋಗುವುದಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News