ಜೈನ ಮುನಿಗಳ ಹಂತಕರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ,ಜು.9: ಬೆಳಗಾವಿಯಲ್ಲಿ ಜೈನ ಮುನಿಗಳಾದ ಕಾಮಕುಮಾರನಂದಿ ಮಹಾರಾಜರ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಾಧ್ಯಮಗಳಿಗೆ ರವಿವಾರ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ, "ಜೈನ ಮುನಿಗಳ ಹತ್ಯೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು, ಬೇರೆಯವರನ್ನು ಪ್ರಚೋದಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು.
ಇನ್ನು ಹುಬ್ಬಳ್ಳಿ ಬಳಿಯ ವರೂರು ಶ್ರೀ ಗುಣಧರ ನಂದಿ ಮಹಾರಾಜರು ಸ್ವಾಮೀಜಿ ಎಲ್ಲಾ ಸ್ವಾಮೀಜಿಗಳಿಗೆ ಭದ್ರತೆ ನೀಡಬೇಕು ಎಂದು ಅನ್ನ, ನೀರು ತ್ಯಜಿಸಿ ಪ್ರತಿಭಟನೆಗೆ ಮುಂದಾಗಿರುವ ಮಾಹಿತಿ ಬಂದಿದೆ. ಸ್ವಾಮೀಜಿಗಳಿಗೆ ಭದ್ರತೆ ನೀಡುವ ಕೆಲಸ ಮಾಡುತ್ತೇವೆ. ಕೂಡಲೇ ಅವರು ತಮ್ಮ ಪ್ರತಿಭಟನೆ ಕೈಬಿಡಬೇಕು. ನಾನು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯ ಶಾಸಕರು, ಮಂತ್ರಿಗಳ ಜೊತೆ ಈ ವಿಚಾರವಾಗಿ ಮಾತನಾಡಿದ್ದೇನೆ" ಎಂದು ತಿಳಿಸಿದರು.