ಸುಪ್ರೀಂಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

Update: 2023-09-26 12:04 GMT

ಬೆಂಗಳೂರು, ಸೆ.26: ರಾಜ್ಯ ಸರಕಾರದ ಗಮನ ಸೆಳೆಯಲು ಬಿಜೆಪಿ ಸೇರಿದಂತೆ ರೈತರು, ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ ಆಚರಣೆ ಮಾಡಿದ್ದೇವೆ. ಆದರೆ, ಈ ಸರಕಾರ ಕೇಳುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶ ಸುಪ್ರೀಂಕೋರ್ಟ್ ಗೆ ತಲುಪಿಸಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಕಡಿಮೆ ನೀರು ಹರಿಸುವಂತೆ ಮಾಡಿಸಿದ್ದೇವೆ ಎನ್ನಲು ಇದೇನು ಬಟ್ಟೆ ವ್ಯಾಪಾರವೆ? ಇದು ಕಾವೇರಿ ನೀರಿನ ಸಮಸ್ಯೆ, ಇದು ಗಂಭೀರವಾದ ವಿಚಾರ ಎಂದರು.

ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರಕಾರದ ಮನವೊಲಿಸಲಿ. ಬೆಂಗಳೂರು ಬಂದ್ ಹಾಗೂ ಕಾವೆರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಜನರ ಆಕ್ರೋಶ ಕಟ್ಟೆ ಒಡೆದಿದೆ. ಇಷ್ಟೆಲ್ಲ ಆದರೂ ಸರಕಾರ ಎಚ್ಚೆತ್ತುಕೊಂಡತೆ ಕಾಣಿಸುತ್ತಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಪ್ರತಿಭಟನೆ ಹತ್ತಿಕ್ಕುವುದಿಲ್ಲ ಅಂತ ಹೇಳಿದರು. ಆದರೆ, ಎಲ್ಲ ಕಡೆ ಪ್ರತಿಭಟನಾಕಾರರನ್ನು ಬೆಳಗ್ಗೆಯಿಂದಲೆ ಬಂಧಿಸುವ ಕೆಲಸ ಮಾಡಿದ್ದಾರೆ. ಇದರ ನಡುವೆಯೂ ಹೋರಾಟಗಾರರೂ ಯಶಸ್ವಿಯಾಗಿ ಬಂದ್ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೊವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮೆಕೆದಾಟು ಪಾದಯಾತ್ರೆ ಮಾಡಿದ್ದರು, ಆಗ ನಾವು ನಿಮಗೆ ಸಮಾವೇಶ ಮಾಡಲು ಅವಕಾಶ ಕೊಟ್ಟಿದ್ದೇವು. ಈಗ ಹೋರಾಟಗಾರರು ಫ್ರೀಡಂ ಪಾರ್ಕ್ ವರೆಗೂ ಜಾಥಾ ನಡೆಸಲು ಬಿಡುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ದೂರಿದರು.

ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದವರು, ಕನ್ನಡ ಸಂಘದವರು ರಾಜಕಾರಣ ಮಾಡುತ್ತಾರಾ? ನಿಮ್ಮ ಒಕ್ಕೂಟದ ಸ್ನೇಹಿತರ ಹಿತ ಕಾಯುವುದನ್ನು ಬಿಟ್ಟು ರಾಜ್ಯದ ಹಿತ ಕಾಯಿರಿ. ಇವರು ತಮಿಳುನಾಡಿಗೆ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ತಿಕೆ ಕೇಳಿದರೆ ಅದನ್ನು ಹೇಗೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಡಿಸಿಎಂ ಹೇಳಿಕೆಯ ಔಚಿತ್ಯವೇನು?: ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಸಿಡಬ್ಲ್ಯುಆರ್‍ಸಿಯಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಆರ್‍ಎಸ್ ಗೆ 10 ಸಾವಿರ ಕ್ಯೂಸೆಕ್ ಒಳ ಹರಿವು ಇದೆ ಎಂದು ಡಿಸಿಎಂ ಹೇಳುವ ಉದ್ದೇಶವೇನಿತ್ತು. ಇವರ ಈ ರೀತಿಯ ಹೇಳಿಕೆಯಿಂದಲೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.

ಸಿಡಬ್ಲ್ಯುಆರ್‍ಸಿ ಮತ್ತೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದು, ಅವರದು ಏನೇ ಆದೇಶ ಬಂದರೂ ರಾಜ್ಯ ಸರಕಾರ ಅದನ್ನು ಒಪ್ಪಬಾರದು. ತಕ್ಷಣ ಸುಪ್ರೀಂ ಕೋರ್ಟ್‍ಗೆ ಮಧ್ಯಂತರ ಅರ್ಜಿ ಹಾಕಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಈ ಆದೇಶ ವೈಜ್ಞಾನಿಕವಾಗಿಲ್ಲ. ಅವರು ವಸ್ತುಸ್ಥಿತಿ ಅರಿತು ಆದೇಶ ಮಾಡಬೇಕು. ರಾಜ್ಯದ ನಾಯಕತ್ವ ಸರಿಯಾದ ಲೀಡ್ ತೆಗೆದುಕೊಳ್ಳಬೇಕು. ಇವರು ಹಗುರವಾಗಿ ತೆಗೆದುಕೊಂಡಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಾವೇ ಮಧ್ಯಂತರ ಅರ್ಜಿ(ಐಎ) ಹಾಕಿದರೆ ನಮ್ಮ ಪರಿಸ್ಥಿತಿ, ಅವರ ಪರಿಸ್ಥಿತಿ ಏನಿದೆ ಅಂತ ಹೇಳಲು ಹೆಚ್ಚು ಅವಕಾಶ ಇರುತ್ತದೆ ಎಂದು ಅವರು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News