ನಿಯಮಗಳ ಪ್ರಕಾರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬಹುದು: ಹೈಕೋರ್ಟ್
ಬೆಂಗಳೂರು: ನೋಂದಣಿ ಕಾಯ್ದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬ್ಯಾಂಕ್‌ನ ಹರಾಜಿನ ಮೂಲಕ ವ್ಯಕ್ತಿಯೊಬ್ಬರಿಗೆ ಸೇರಿದ್ದ ಜಮೀನು ಖರೀದಿಸಿದ್ದು, ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡದ ಉಪ ನೊಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಭರತ್ ಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಅವರ ಆಸ್ತಿಯನ್ನು ಹರಾಜು ಮೂಲಕ ಖರೀದಿ ಮಾಡಿದವರಿಗೆ ನೋಂದಣಿ ಮಾಡುವುದಕ್ಕೆ ನಿರಾಕರಿಸಲು ಅವಕಾಶವಿಲ್ಲ ಎಂದು ಆದೇಶಿಸಿದೆ.
ಈ ವೇಳೆ ನ್ಯಾಯಪೀಠ, ನೋಂದಣಿ ನಿಯಮಗಳು ಅಡಿಯಲ್ಲಿ ಯಾವುದೇ ಗೊಂದಲಗಳು ಇಲ್ಲವಾದಲ್ಲಿ ನೋಂದಣಿ ಮಾಡದೆ ನಿರಾಕರಿಸುವ ಅಧಿಕಾರವನ್ನು ಉಪನೋಂದಣಾಧಿಕಾರಿಗಳಿಗೆ ಇಲ್ಲ ತಿಳಿಸಿದೆ.
ಜತೆಗೆ ಪ್ರಕರಣ ಸಂಬಂಧ ಹಾರಾಜೀನಲ್ಲಿ ಆಸ್ತಿ ಖರೀದಿಸಿದ ಅರ್ಜಿದಾರರು ದಾಖಲೆಗಳನ್ನು ಪಡೆದು ವಿಳಂಬವಿಲ್ಲದೆ ತಕ್ಷಣ ನೋಂದಣಿ ಮಾಡಿಕೊಡುವಂತೆ ಉಪನೋಂದಣಾಧಿಕಾರಿಗೆ ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, 2002 ರ ಹಣಕಾಸು ಸ್ವತ್ತುಗಳು ಮತ್ತು ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆ (ಸರ್ಫೇಸಿ ಕಾಯ್ದೆಯ) ಸೆಕ್ಷನ್ 26(ಇ) ಅನ್ವಯ ಭದ್ರತಾ ಆಸಕ್ತಿ ನೋಂದಣಿಯ ನಂತರ ಜಾರಿಯಲ್ಲಿರುವ ಕಾನೂನಿಗಿಂತ ಸುರಕ್ಷಿತ ಸಾಲಗಾರರಿಗೆ ಆದ್ಯತೆಯನ್ನು ಕಡ್ಡಾಯಗೊಳಿಸುತ್ತದೆ. ಸೆಕ್ಷನ್ 35 ಪ್ರಕಾರ, ಸದ್ಯಕ್ಕೆ ಜಾರಿಯಲ್ಲಿರುವ ಕಾನೂನಿನಲ್ಲಿ ಅಸಮಂಜಸವಾಗಿದ್ದರೂ ಈ ಕಾಯ್ದೆ ಪರಿಣಾಮ ಬೀರಲಿದೆ. ಆದರೆ, ಈ ರೀತಿಯ ಪ್ರಕರಣಗಳಲ್ಲಿ ಸಾಲಗಾರನ ಹಕ್ಕು ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಯಾವುದೇ ಆದೇಶ ಮಾಡದಿದ್ದಲ್ಲಿ ಅದನ್ನು ತಡೆಹಿಡಿಯಲಾಗದು ಎಂದು ಪೀಠ ಹೇಳಿದೆ.
ಅಷ್ಟೆ ಅಲ್ಲದೆ, ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಲಯ, ಅರೆ ನ್ಯಾಯಾಲಯದ ಮುಂದೆ ಯಾವುದೇ ರೀತಿಯ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಹೀಗಾಗಿ ಉಪನೋಂದಣಿ ನಿಯಮ 171ರ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ ಮಾತ್ರ ನೋಂದಣಿಗೆ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ಅವರಿಗೆ ನೋಂದಣಿ ನಿರಾಕರಸುವ ಅಧಿಕಾರ ಹೊಂದಿರುವುದಿಲ್ಲ ಎಂದಿದೆ ಮುಂದುವರಿದು , ಈ ಕುರಿತಂತೆ ರಾಜ್ಯ ಸರ್ಕಾರ ಈ ಸಂಬಂಧ ನೋಂದಣಿ ನಿಯಮಗಳ ಕುರಿತಂತೆ ಸೂಕ್ತ ರೀತಿಯ ಸೂತ್ತೋಲೆ ಹೊರಡಿಸಬೇಕು ಎಂದು ಪೀಠ ಸಲಹೆ ನೀಡಿದೆ. ಬೆಂಗಳೂರು ನಗರದ ವಿಲ್ಸ್‌ನ್ ಗಾರ್ಡನ್‌ನ ಹೊಂಬೇಗೌಡನಗರದಲ್ಲಿ 6000 ಚದರ ಅಡಿಯ ಅಡಮಾನ ಆಸ್ತಿಗೆ ಸಂಬಂಧಿಸಿದಂತೆ 2022ರ ಮಾರ್ಚ್ ತಿಂಗಳಲ್ಲಿ ಕೆನರಾ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಅರ್ಜಿದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಹರಾಜಿನ ಎಲ್ಲ ಪ್ರಕ್ರಿಯೆಗಳು ಮುಗಿತ ನಂತರ 2022ರ ಸೆ.30ರಂದು ಅವರ ಪರವಾಗಿ ಮಾರಾಟ ಪ್ರಮಾಣ ಪತ್ರವನ್ನು ನೀಡಲಾಗಿತ್ತು.
ಅಲ್ಲದೆ, ಜಮೀನಿಗೆ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸ್ಟ್ಯಾಂಪ್ ಮೊತ್ತವನ್ನು ಪಾವತಿಸಲಾಗಿದ್ದು, ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಕೋರಿ ಜೆ.ಪಿ.ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಬ್ ರಿಜಿಸ್ಟ್ರಾರ್, ಜಮೀನಿನ ಮೂಲ ಮಾಲಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ಜಮೀನನ್ನು ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. 2024ರ ಫೆ.12ರಂದು ಮತ್ತೊಂದು ಬಾರಿ ಮನವಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.