ಜಾತಿಗಣತಿ ವರದಿ ಸಲ್ಲಿಕೆ | ಜೂನ್ 6ರ ವರೆಗೆ ಯಾವುದೇ ಕ್ರಮವಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರಕಾರ

Update: 2024-03-21 17:48 GMT

ಬೆಂಗಳೂರು: ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಹೈಕೋರ್ಟ್ ಗೆ ಸರಕಾರ ಮಾಹಿತಿ ನೀಡಿದೆ.

ಕಾಂತರಾಜು ಆಯೋಗದ ಅಂಕಿ-ಅಂಶಗಳನ್ನು ಆಧರಿಸಿ ಸಿದ್ದಪಡಿಸಲಾದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಪ್ರಶ್ನಿಸಿ ಸಮಾಜ ಸಂಪರ್ಕ ವೇದಿಕೆ (ರಿ) ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಪರವಾಗಿ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜೂನ್ 6ರವರೆಗೆ ರಾಜ್ಯ ಸರಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. 

ಈ ವೇಳೆ ಅರ್ಜಿದಾರರ ಪರ ವಕೀಲರ ಅಭಿಷೇಕ್ ಕುಮಾರ್, ಕಾಂತರರಾಜ್ ವರದಿ ಸಲ್ಲಿಸುವಾಗ ಆಯೋಗದ ಕಾರ್ಯದರ್ಶಿ ಸಹಿ ಇರಲಿಲ್ಲ. ಅದೇ ಆಧಾರದಲ್ಲಿ ಈಗ ವರದಿ ಸಲ್ಲಿಸಲಾಗಿದೆ. ನಮಗೆ ವರದಿ ಬಗ್ಗೆ ಆತಂಕವಿದೆ. ಆಯೋಗ ಸ್ವತಂತ್ರವಾಗಿ ಸಮೀಕ್ಷೆ ನಡೆಸಿದೆಯೋ ಅಥವಾ ಸರ್ಕಾರದ ಅಣತಿಯಂತೆ ಆಗಿದೆಯೇ ಎಂಬ ಅನುಮಾನವಿದೆ. ವರದಿಯು ಚುನಾವಣೆ ಮೇಲೆ ಇದು ಪರಿಣಾಮ ಬೀರಬಹುದು. ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ವರದಿ ಸ್ವೀಕರಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಆಯೋಗದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸರಕಾರ ವರದಿ ಸ್ವೀಕರಿಸಿದೆ. ಚುನಾವಣೆ ಘೋಷಣೆಯಾಗುವ ಸಾಕಷ್ಟು ಮುಂಚೆ ವರದಿಯನ್ನು ಸಲ್ಲಿಸಲಾಗಿದೆ. ಚುನಾವಣೆ ಘೋಷಣೆಗೂ, ಚುನಾವಣೆ ಜರುಗುವುದಕ್ಕೂ ವರದಿಯನ್ನು ಸರಕಾರ ಸ್ವೀಕರಿಸುವುದಕ್ಕೂ ಸಂಬಂಧವಿಲ್ಲ. ಈಗ ಆತುರ ಮಾಡುತ್ತಿರುವ ಅರ್ಜಿದಾರರು 2014ರಲ್ಲಿ ತಿದ್ದುಪಡಿಯಾದ ಕಾಯ್ದೆಯನ್ನು 2024ರಲ್ಲಿ ಪ್ರಶ್ನೆಗ ಮಾಡುತ್ತಿದ್ದಾರೆ. ಅಷ್ಟಕ್ಕೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ನೀತಿ ಸಂಹಿತೆ ಜಾರಿ ಇರುವಾಗ ಸಚಿವ ಸಂಪುಟ ಸಭೆ ನಡೆಸಲಾಗುವುದಿಲ್ಲ. ಹೀಗೆ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಜೂನ್ 6ರವರೆಗೆ ಸರಕಾರದಿಂದ ಯಾವ ಕ್ರಮವೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಜನಗಣತಿ ಕಾಯ್ದೆಯಡಿ ಗಣತಿ ಮಾಡಲಾಗಿದೆಯೇ ಅನ್ನುವುದು ಇಲ್ಲಿರುವ ಪ್ರಶ್ನೆ. ಆದರೆ, ಅದು ಕೇಂದ್ರ ಸರಕಾರದ ವ್ಯಾಪ್ತಿ. ಹಿಂದುಳಿದ ವರ್ಗಗಳ ಆಯೋಗ ಜನಗಣತಿ ನಡೆಸಿಲ್ಲ. 54 ಅಂಶಗಳನ್ನು ಆಧರಿಸಿ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಸೆಕ್ಷನ್11ರ ಪ್ರಕಾರ ಸಮೀಕ್ಷಾ ವರದಿಗೆ ಶಾಸನಬದ್ಧತೆ ಇದೆ. ಬಿಹಾರದಲ್ಲಿ ಇಂತಹ ಸಮೀಕ್ಷೆ ಆಗಿದೆ, ಒಡಿಸ್ಸಾದಲ್ಲಿ ನಡಿತಿದೆ, ತಮಿಳುನಾಡಿನಲ್ಲಿ ಪ್ರಾರಂಭವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಕೇಂದ್ರ ಸರಕಾರದ ಗೃಹ ಕಾರ್ಯದರ್ಶಿ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜೊತೆಗೆ ಸಮಾಜ ಸಂಪರ್ಕ ವೇದಿಕೆ (ರಿ) ಅರ್ಜಿ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಹೇಳಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News