ಹಾಸನ | ಪತ್ನಿಯಿಂದ ಕಿರುಕುಳ ಆರೋಪ: ವೀಡಿಯೋ ಮಾಡಿ ಪತಿ ಆತ್ಮಹತ್ಯೆ
ಹಾಸನ: ಜು,12 ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳಕ್ಕೆ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ, ಮಾರಗೌಡನಹಳ್ಳಿ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ವಿನಯ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ವಿಷ ಸೇವಿಸುವ ಮುನ್ನ ವಿಡಿಯೋ ಮಾಡಿದ್ದು, 'ನನ್ನ ಸಾವಿಗೆ ಪತ್ನಿ ಆಶಾ ಹಾಗೂ ಆಕೆಯ ತಾಯಿ, ಅಕ್ಕಕಾರಣ ವಾಗಿದ್ದು ಅವರಿಗೆ ಶಿಕ್ಷೆಯಾಗಬೇಕು, ಅಪ್ಪ, ಅಮ್ಮ, ಅಕ್ಕ ನನ್ನನ್ನು ಕ್ಷಮಿಸಿಬಿಡಿ' ಎಂದು ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕು ಪಡು ವಲಹಿಪೆ ಗ್ರಾಮದ ವಿನಯ್, ಅರಕಲಗೂಡು ತಾಲೂಕು ಗಂಜಲಗೂಡು ಗ್ರಾಮದ ಆಶಾರೊಂದಿಗೆ 2011 ರಲ್ಲಿ ವಿವಾಹ ಆಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾದ ಬಳಿಕ ಆಶಾಗೆ ಕೆಎಸ್ಸಾರ್ಟಿಸಿಯಲ್ಲಿ ಮ್ಯಾಕಾನಿಕ್ ಕೆಲಸ ಸಿಕ್ಕಿತ್ತು. ನಂತರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಕೆಲವು ದಿನಗಳ ಹಿಂದೆ ಪತ್ನಿ ಆಶಾ ವಿಷ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ್ದರೆನ್ನಲಾಗಿದ್ದು, ಪತಿ ವಿನಯ್ ಹಾಗೂ ಆತನ ಪೋಷಕರ ಮೇಲೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಶಾ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಂಧಿಸಿದ್ದರು ಎಂದು ಹೇಳಲಾಗಿದೆ. ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ವಿನಯ್ ಸಾವಿಗೆ ಆಶಾ ಹಾಗೂ ಅವರ ಪೋಷಕರು ಕಾರಣರಾಗಿದ್ದು ಅವರನ್ನು ಬಂಧಿಸುವಂತೆ ಒತ್ತಾತಿಸಿ, ವಿನಯ್ ಕುಟುಂಬಸ್ಥರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.