ಜಾತಿಗಣತಿ | ಹಿಂದುಳಿದ ವರ್ಗಗಳಿಗೆ ಆಗುವ ಪ್ರಯೋಜನ ಏನೆಂದು ಚರ್ಚೆಯಾಗಬೇಕು: ಸುನಿಲ್ ಕುಮಾರ್

Update: 2025-04-14 19:08 IST
Photo of  V. Sunil Kumar

ವಿ.ಸುನಿಲ್ ಕುಮಾರ್

  • whatsapp icon

ಬೆಂಗಳೂರು: ‘ಸಿದ್ದರಾಮಯ್ಯನವರಿಂದ ಸಿದ್ದರಾಮಯ್ಯನವರಿಗಾಗಿ ಸಿದ್ದರಾಮಯ್ಯನವರಿಗೋಸ್ಕರ ಸಿದ್ದರಾಮಯ್ಯನವರೇ ಕೈಹಿಡಿದು ಬರೆಸಿದ್ದೇ ಈ ಜಾತಿ ಗಣತಿ. ಬೆಲೆ ಏರಿಕೆ, ನಾಯಕತ್ವ ಬದಲಾವಣೆ, ಹನಿ ಟ್ರ್ಯಾಪ್ ನಂಥ ವಿಚಾರಗಳು ತಮ್ಮ ಖುರ್ಚಿಗೆ ಧಕ್ಕೆ ತಂದಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಜಾತಿ ಗಣತಿಯ ಹೆಲ್ಮೆಟ್ ಧರಿಸಿದ್ದಾರೆ’ ಎಂದು ಬಿಜೆಪಿಯ ಶಾಸಕ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ.

ಸೋಮವಾರ ಎಕ್ಸ್‌ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಈ ಸಮೀಕ್ಷಾ ವರದಿಯ ಸೋರಿಕೆಯಾದ ಭಾಗಗಳ ಪ್ರಕಾರ ಮುಸ್ಲಿಮರು ಅತಿದೊಡ್ಡ ಜನ ಸಮುದಾಯ! ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಛಿದ್ರಗೊಳಿಸಿ ಮುಸ್ಲಿಮರನ್ನು ಪೋಷಿಸಿ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ನಡೆಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ವಿಶೇಷ ಕ್ಯಾಬಿನೆಟ್, ಸಂಪುಟ ಉಪಸಮಿತಿ ಹೆಸರಿನಲ್ಲಿ ಒಂದಿಷ್ಟು ಕಾಲಹರಣ ನಡೆಸುವುದು ಸದ್ಯದ ಲೆಕ್ಕಾಚಾರ. ಹಿಂದುಳಿದ ವರ್ಗಗಳ ಛಾಂಪಿಯನ್ ಎಂದು ಸ್ವಯಂ ಘೋಷಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ವರದಿಯಿಂದ ಹಿಂದುಳಿದ ವರ್ಗದವರಿಗೆ ಆಗುವ ಪ್ರಯೋಜನ ಏನೆಂಬುದರ ಬಗ್ಗೆ ಮೊದಲು ಚರ್ಚೆಯಾಗಬೇಕು’ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.

‘ಅದಕ್ಕಿಂತ ಹೆಚ್ಚಾಗಿ ಒಟ್ಟಾರೆ ಸಮಾಜದ ಮೇಲಿನ ಪರಿಣಾಮವೇನೆಂಬುದು ವಿಶ್ಲೇಷಣೆಗೆ ಒಳಪಡಬೇಕು. ವರದಿಯ ವೈಜ್ಞಾನಿಕತೆ ಹಾಗೂ ಪ್ರಸ್ತುತತೆಯ ಬಗ್ಗೆ ತುರ್ತು ಅಧ್ಯಯನಕ್ಕೆ ಉಭಯಸದನದ ಜಂಟಿ ಸದನ ಸಮಿತಿ ರಚನೆ ಮಾಡಿ. ಸುಮ್ಮನೆ ವರದಿ ಮಂಡಿಸಿ ಗಾಳಿಯಲ್ಲಿ ಗುಂಡು ಹೊಡೆದರೆ ‘ಮನೆಗೆ ಮಗನ್ನಲ್ಲ’..... ಎಂಬಂತಾಗುತ್ತದೆಯಷ್ಟೇ’ ಎಂದು ಅವರು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News