ಸಿದ್ದರಾಮಯ್ಯ, ಇತರ ಕಾಂಗ್ರೆಸ್ ಮುಖಂಡರ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ತಡೆ ಹೇರಿದ ಸುಪ್ರಿಂ ಕೋರ್ಟ್
ಹೊಸದಿಲ್ಲಿ: ಕರ್ನಾಟಕದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2022ರಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಜ್ ಸಚಿವ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ.
ಇದೇ ಪ್ರತಿಭಟನೆಗೆ ಸಂಬಂಧಿಸಿದಂತೆ ಈಗಿನ ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಎಂ ಬಿ ಪಾಟೀಲ್, ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರ ವಿರುದ್ಧದ ಕ್ರಮಕ್ಕೂ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ವಿಧಿಸಿದೆ.
ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಆವರ ಪೀಠ ನಡೆಸಿದೆ.
“ಅದೊಂದು ರಾಜಕೀಯ ಪ್ರತಿಭಟನೆಯಾಗಿತ್ತು ಹಾಗೂ ಅದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸಂವಿಧಾನದ ವಿಧಿ 19(1)(ಎ) ಅನ್ವಯ ಪ್ರತಿಭಟನೆಯ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲದೆ ಶಾಂತಿಯುತವಾಗಿ ನಡೆಸಲಾದ ರಾಜಕೀಯ ಪ್ರತಿಭಟನೆಯನ್ನು ಹತ್ತಿಕ್ಕಲು ಶಿಕ್ಷಾರ್ಹ ನಿಬಂಧನೆಗಳನ್ನು ಬಳಸಬಾರದು,” ಎಂದು ಸಿದ್ದರಾಮಯ್ಯ ಪರ ವಕೀಲ ಡಾ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಹೈಕೋರ್ಟ್ ಈ ಹಿಂದೆ ಅಪೀಲು ತಿರಸ್ಕರಿಸಿ ಫೆಬ್ರವರಿ 26, 2024ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿದ್ದರಾಮಯ್ಯಗೆ ಸೂಚಿಸಿತ್ತು.
ಪ್ರತಿಭಟನೆಯು ಎಪ್ರಿಲ್ 14, 2022ರಂದು ನಡೆದಿತ್ತು ಹಾಗೂ ಸಿದ್ದರಾಮಯ್ಯ ಸಹಿತ 35ರಿಂದ 40 ಕಾಂಗ್ರೆಸ್ ಮುಖಂಡರಿದ್ದ ಗುಂಪು ಆಗಿನ ಸಚಿವ ಈಶ್ವರಪ್ಪ ಅವರ ನಿವಾಸವಿರುವ ರಸ್ತೆಯತ್ತ ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿತ್ತು.