ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಆರೋಪ ಪ್ರಕರಣ; ಬೋಗಸ್ ಎಫ್.ಎಸ್.ಎಲ್ ವರದಿ ತಯಾರಿಸುವ ಅನುಮಾನ: ಬಿ.ವೈ. ವಿಜಯೇಂದ್ರ

Update: 2024-03-02 07:28 GMT

Photo: fb.com/vijayendrayediyurappa

ಬೆಂಗಳೂರು: ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿರುವುದು ಎಫ್.ಎಸ್.ಎಲ್ ವರದಿಯಿಂದ ದೃಢಪಟ್ಟ ಮಾಹಿತಿ ನಮಗಿದೆ. ಎಲ್ಲೋ ಒಂದು ಕಡೆ ಈ ರಾಜ್ಯ ಸರಕಾರದ ವಿಳಂಬ ನೀತಿ, ನಡವಳಿಕೆಯು ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಗಸ್ ಎಫ್.ಎಸ್.ಎಲ್ ವರದಿ ತಯಾರಿಸುವ ಅನುಮಾನ ಕಾಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,  ರಾಜ್ಯ ಸರಕಾರ, ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ; ಸಾಮಾನ್ಯ ಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ‘ಆ ರೀತಿ ಘೋಷಣೆ ಕೂಗಿಯೇ ಇಲ್ಲ’ ಎಂದಿದ್ದರು. ‘ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ’ ಎಂದಿದ್ದರು. ವಿಧಾನಸೌಧಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಿ.ಸಿ.ಟಿ.ವಿ. ಫೂಟೇಜ್ ಗಮನಿಸಿ ಅರ್ಧ ಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಎಫ್.ಎಸ್.ಎಲ್ ವರದಿ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಘಟನೆ ನಡೆದು ನಾಲ್ಕೈದು ದಿನ ಕಳೆದಿದೆ. ಇವತ್ತಿಗೂ ಎಫ್.ಎಸ್.ಎಲ್ ವರದಿ ಬಂದಿಲ್ಲ ಎಂದರೆ ಏನು ಅರ್ಥ. ಘಟನೆ ಕುರಿತು ನಿರ್ಧರಿಸಲು 5 ದಿನ ಬೇಕೇ? ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ? ಹಾದಿಬೀದಿಯಲ್ಲಿ ಕೂಗಿದ್ದಲ್ಲ. ವಿಧಾನಸೌಧದಲ್ಲೇ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜೊತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ ಎಂದು ಪ್ರಶ್ನಿಸಿದರು.

ಎಫ್.ಎಸ್.ಎಲ್ ವರದಿ ಬಂದಿದೆ; ಪಾಕ್ ಪರ ಘೋಷಣೆ ದೃಢವಾಗಿದೆ ಎಂದು ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿವೆ. ಇದರ ಮಧ್ಯೆ ಮುಖ್ಯಮಂತ್ರಿಗಳು ಎಫ್.ಎಸ್.ಎಲ್ ವರದಿ ಬಂದೇ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.  ಪ್ರಕರಣಗಳ ಬಗ್ಗೆ ರಾಜ್ಯ ಸರಕಾರದ ನಡವಳಿಕೆ ಮತ್ತು ಸಚಿವರ,  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗಳು ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತಿದೆ ಎಂದರು.

ಏನೂ ಆಗಿಯೇ ಇಲ್ಲ ಎಂಬಂತೆ ಸಚಿವರು ಮನಸೋ ಇಚ್ಛೆ ಹೇಳಿಕೆ ಕೊಡುತ್ತಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳು, ಸರಕಾರ ಇಂಥ ಘಟನೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡದಂತೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಾಂಬ್ ಸ್ಫೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರಕಾರಕ್ಕೆ ಸಂಪೂರ್ಣ ಸಹಕಾರ ಕೊಡಲಿದ್ದೇವೆ ಎಂದು ನಿನ್ನೆಯೇ ಸ್ಪಷ್ಟಮಾತುಗಳಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News