ವಾಟಾಳ್ ಕರೆ ನೀಡಿರುವ ʼಕರ್ನಾಟಕ ಬಂದ್‍ʼಗೆ ಕರವೇ ಬೆಂಬಲವಿಲ್ಲ: ಟಿ.ಎ.ನಾರಾಯಣಗೌಡ

Update: 2025-03-01 20:30 IST
ವಾಟಾಳ್ ಕರೆ ನೀಡಿರುವ ʼಕರ್ನಾಟಕ ಬಂದ್‍ʼಗೆ ಕರವೇ ಬೆಂಬಲವಿಲ್ಲ: ಟಿ.ಎ.ನಾರಾಯಣಗೌಡ

ಟಿ.ಎ.ನಾರಾಯಣಗೌಡ

  • whatsapp icon

ಬೆಂಗಳೂರು : ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಮಾ.22ರ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಿರುವುದಿಲ್ಲ. ಈ ಬಂದ್‍ನಲ್ಲಿ ಕರವೇ ಯಾವುದೇ ಸ್ವರೂಪದಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಬೆಳಗಾವಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಸಂಬಂಧ ಕಳೆದ ಮಂಗಳವಾರ ಬೆಳಗಾವಿಯಲ್ಲಿ ದೊಡ್ಡ ಸ್ವರೂಪದ ಚಳವಳಿ ನಡೆಸಿದೆ. ನಾನು ಅಲ್ಲಿಗೆ ಹೋದ ನಂತರ ನಿರ್ವಾಹಕನ ಮೇಲೆ ಹಾಕಿದ್ದ ಸುಳ್ಳು ಪೋಕ್ಸೋ ದೂರನ್ನು ಹಿಂದಕ್ಕೆ ಪಡೆಯಲಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿದ್ದ ಇನ್‍ಸ್ಪೆಕ್ಟರ್ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸ್ವತಃ ತಾವೇ ಆಗಮಿಸಿದ ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕನ್ನಡಿಗರ ಮೇಲೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸ್ವರೂಪದ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗಳ ಮೇಲೆ ದಾಳಿ ನಡೆಸಿ ಬಸ್ ಚಾಲಕ, ನಿರ್ವಾಹಕರ ಮೇಲೆ ದಾಳಿಗಳು ಮುಂದವರಿದಲ್ಲಿ ಕರವೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ. ಈ ಸಂಘರ್ಷ ಮುಂದುವರಿಯುವುದು ಬೇಡವೆನ್ನುವುದಾದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಸೂಕ್ತ ಕ್ರಮ ಕೈಗೊಂಡು ಕನ್ನಡಿಗರ ಮೇಲಿನ ದಾಳಿಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲಿನಿಂದ ಕರ್ನಾಟಕ ರಕ್ಷಣಾ ವೇದಿಕೆ ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ‘ಕರ್ನಾಟಕ ಬಂದ್’ ಕರೆಗಳಿಗೆ ಕೈಜೋಡಿಸಿಲ್ಲ. ಬಂದ್ ನಿಂದ ಜನ ಸಾಮಾನ್ಯರಿಗೆ, ಅದರಲ್ಲೂ ದಿನಗೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತದೆ. ನಮಗೆ ನಾವೇ ತೊಂದರೆ ಕೊಟ್ಟುಕೊಂಡು ಬಂದ್ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಇರುತ್ತವೆ. ಈ ಸಂದರ್ಭದಲ್ಲಿ ಬಂದ್ ನಡೆಸುವುದರಿಂದ ಅವರಿಗೆ ಅನಾನುಕೂಲವಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಯಾವಾಗಲೂ ‘ಬಂದ್' ಹೋರಾಟಗಾರರ ಕೊನೆಯ ಅಸ್ತ್ರವಾಗಿರಬೇಕು ಎಂದು ನಂಬಿಕೊಂಡು ಬಂದಿದೆ ಎಂದಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಈಗ ಕೆಪಿಎಸ್‍ಸಿ ಪರೀಕ್ಷೆಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದಲ್ಲಿ ಕಲಿತ ಕನ್ನಡದ ಮಕ್ಕಳ ಪರವಾಗಿ ಚಳವಳಿ ಸಂಘಟಿಸುತ್ತಿದೆ. ಇದು ಕನ್ನಡಿಗರ ಬದುಕಿನ ಪ್ರಶ್ನೆ, ಕನ್ನಡದ ಅಸ್ಮಿತೆಯ ಪ್ರಶ್ನೆ ಎಂದು ಹೇಳಿದ್ದಾರೆ.

ವಾಟಾಳ್ ನಾಗರಾಜ್ ಅವರ ಕುರಿತು ಅಪಾರವಾಗಿ ಗೌರವವಿಟ್ಟುಕೊಂಡೇ ಅವರು ಮಾರ್ಚ್ 22ರಂದು ಕರೆ ನೀಡಿರುವ ‘ಕರ್ನಾಟಕ ಬಂದ್’ ನಿಂದ ಕರ್ನಾಟಕ ರಕ್ಷಣಾ ವೇದಿಕೆ ದೂರ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News