ಅವೈಜ್ಞಾನಿಕವಾಗಿ ಹೂಳು ಎತ್ತುತ್ತಿರುವ ವಿರುದ್ದ ಕ್ರಮ ಕೈಗೊಳ್ಳಿ: ಸಚಿವ ಬೋಸರಾಜು
ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಹೂಳನ್ನು ಅವೈಜ್ಞಾನಿಕವಾಗಿ ಎತ್ತಲಾಗುತ್ತಿದ್ದು, ಇದರಿಂದ ಕೆರೆಗಳಲ್ಲಿನ ನೀರು ಇಂಗಿಹೋಗಿ ನೀರಿನ ಅಭಾವ ಸೃಷ್ಟಿಗೆ ಕಾರಣವಾಗುತ್ತಿದೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ, ಸಚಿವ ಎನ್.ಎಸ್.ಬೋಸರಾಜು ಸೂಚನೆ ನೀಡಿದ್ದಾರೆ.
ಗುರುವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಹೂಳನ್ನು ಎತ್ತುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಿರ್ದಿಷ್ಟ ಮಿತಿಗಿಂತ ಜಾಸ್ತಿ ಮತ್ತು ಅವೈಜ್ಞಾನಿಕವಾಗಿ ಹೂಳನ್ನು ಎತ್ತುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ. ಅಲ್ಲದೆ, ಈ ರೀತಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿ ಹೂಳು ಎತ್ತುತ್ತಿರುವುದರಿಂದ ಕೆರೆಗಳಲ್ಲಿನ ನೀರು ಇಂಗಿಹೋಗಿ ನೀರಿನ ಅಭಾವ ಸೃಷ್ಟಿಯಾಗುತ್ತಿದೆ ಎಂದು ಆತಂಕಪಟ್ಟಿದ್ದಾರೆ.
ಅಲ್ಲದೆ, ಅಂತರ್ಜಲ ಮಟ್ಟವೂ ಗಣನೀಯವಾಗಿ ಕ್ಷೀಣಿಸುತ್ತಿದೆ. ಈ ಹಿನ್ನಲೆಯಲ್ಲಿ ಇಂತಹ ಚಟುವಟಿಕೆಗಳ ವಿರುದ್ದ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ವೃತ್ತಗಳ ಅಧೀಕ್ಷಕ ಅಭಿಯಂತರರುಗಳಿಗೆ ಹಾಗೂ ಎಲ್ಲ ವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿಲಾಗಿದೆ ಎಂದು ಅವರು ತಿಳಿಸಿದ್ದಾರೆ.