ಬಿಜೆಪಿ ಸರಕಾರದ ಅವೈಜ್ಞಾನಿಕ ಅಧಿಸೂಚನೆಯಿಂದ ನೆನೆಗುದಿಗೆ ಬಿದ್ದ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ

Update: 2023-10-24 17:42 GMT

ಬೆಂಗಳೂರು, ಅ.24: ಹಿಂದಿನ ಬಿಜೆಪಿ ಸರಕಾರವು ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿ ಅವೈಜ್ಞಾನಿಕವಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಈಗ ಇದು ನ್ಯಾಯಾಲಯದಲ್ಲಿರುವ ಕಾರಣ ಹುದ್ದೆ ನೇಮಕಾತಿ ಮಾಡಲು ಕಾಂಗ್ರೆಸ್ ಸರಕಾರಕ್ಕೆ ತೊಡಕು ಉಂಟಾಗುತ್ತಿರುವುದು ಮುನ್ನೆಲೆಗೆ ಬಂದಿದೆ.

ಬಿಜೆಪಿ ಸರಕಾರವು 2022ರ ಫೆ.25ರಂದು 400 ಪಶು ವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿಗೆ ಕರಡು ಅಧಿಸೂಚನೆಯನ್ನು ಹಾಗೂ ಮಾ.22ರಂದು ಅಂತಿಮ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 400 ಹುದ್ದೆಗಳ ಪೈಕಿ 52 ಹುದ್ದೆಗಳು ಬ್ಯಾಕ್‍ಲಾಗ್ ಹುದ್ದೆ, 342 ಹುದ್ದೆಗಳು ಸಾಮಾನ್ಯ ಹುದ್ದೆಗಳಾಗಿದ್ದು, ಪ್ರತ್ಯೇಕವಾಗಿ ಅಧಿಸೂಚನೆಯನ್ನು ಹೊರಡಿಸಿದ್ದರೂ, ಅಧಿಸೂಚನೆಗಳಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಯ ನಿಯಮಾವಳಿಯನ್ನೇ ಗಾಳಿಗೆ ತೂರಿರುವುದು ಕಂಡು ಬಂದಿದೆ.

ಅಧಿಸೂಚನೆಯಲ್ಲಿ ಈ ಯಾವ ಹುದ್ದೆಗಳಿಗೂ ಕೆಪಿಎಸ್‍ಸಿ ಮತ್ತು ಕೆಇಎ ಮೂಲಕ ಪರೀಕ್ಷೆಯನ್ನು ನಡೆಸುವುದಾಗಿ ಸೂಚಿಸಿಲ್ಲ. ಬದಲಾಗಿ ಪದವಿಯಲ್ಲಿ ಗರಿಷ್ಟ ಅಂಕಗಳನ್ನು ಪರಿಗಣಿಸಿ ಮೆರಿಟ್ ಲಿಸ್ಟ್ ಅನ್ನು ತಯಾರಿಸುವುದಾಗಿ ತಿಳಿಸಿದೆ. ಇದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶದ ಉಲ್ಲಂಘನೆಯೂ ಆಗಿದ್ದು, ಅಭ್ಯರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು.

ಅಲ್ಲದೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಯಾರು ಮಾಡಲು 9 ಅಧಿಕಾರಿಗಳುಳ್ಳ ಆಯ್ಕೆ ಸಮಿತಿಯನ್ನೂ ರಚನೆ ಮಾಡಲಾಗಿತ್ತು. ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಶು ವೈದ್ಯಾಕೀಯ ಪದವಿ ಮಗಿಸಿರಬೇಕು ಹಾಗೂ ಕರ್ನಾಟಕ ವೆಟರ್ನಿಟಿ ಕೌನ್ಸಿಲ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರಬೇಕು ಎಂಬ ಕನಿಷ್ಟ ಅರ್ಹತೆಯನ್ನು ನಿಗಧಿ ಮಾಡಲಾಗಿತ್ತು. ಆದರೆ ಪದವಿಯಲ್ಲಿ ಅಭ್ಯರ್ಥಿಗಳು ತೆಗೆದ ಗರಿಷ್ಟ ಅಂಕಗಳ ಆಧಾರದಲ್ಲಿ ಆಯ್ಕೆ ಪಟ್ಟಿ ತಯಾರು ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿರುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

ಕರ್ನಾಟಕ ನಾಗರೀಕ ಸೇವಾ ನಿಯಮಗಳು 2021ರ ಅನ್ವಯ ಪದವಿಯ ಅಂಕಗಳ ಆಧಾರದ ಮೇರೆಗೂ ಹುದ್ದೆಗಳಿಗೆ ನೇಮಕಾತಿ ಮಾಡಬಹುದು. ಆದರೆ ಅಭ್ಯರ್ಥಿಗಳಿಗೆಲ್ಲ ಒಂದೇ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದಿರಬೇಕು ಎಂಬ ನಿಯಮವಿದೆ. ಬಿಜೆಪಿ ಸರಕಾರದ ಅವಧಿಯಲ್ಲೇ(2022) ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಧಿಸೂಚನೆಯ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಆದರೆ ಸರಕಾರ ಇದನ್ನು ಪರಿಗಣಿಸಲಿಲ್ಲ.

ಈ ಅಧಿಸೂಚನೆಯಡಿ ಅನೇಕ ಅರ್ಹ ಮತ್ತು ಪರಿಣಿತಿ ಹೊಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಪದವಿಯ ಅಂಕಪಟ್ಟಿಗಳನ್ನು ದೇಶದ ವಿವಿಧ ವಿಶ್ವವಿದ್ಯಾಲಯಗಳು ನೀಡಲಿದ್ದು, ಇಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಎಲ್ಲ ಸರಕಾರಿ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳಂತೆ ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೂ ಕೆಪಿಎಸ್‍ಸಿ ಅಥವಾ ಕೆಇಎ ಮೂಲಕ ಕಡ್ಡಾಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೆಲವು ಅಭ್ಯರ್ಥಿಗಳು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆಯ ಬಳಿಕ ಕೋರ್ಟ್ ಪ್ರಕರಣವನ್ನು ಇತ್ಯಾರ್ಥಪಡಿಸಿದೆ.

ಕೋರ್ಟ್ ಆದೇಶದ ಬಳಿಕ ಕೆಪಿಎಸ್‍ಸಿ ಮೂಲಕ ಇಲಾಖೆಯು ಪರೀಕ್ಷೆಯನ್ನು ನಡೆಸಲು ಚಿಂತಿಸಿದೆ. ಆದರೆ ಅಧಿಸೂಚನೆಯು ರದ್ದಾಗುತ್ತಿದ್ದಂತೆ ಮತ್ತೆ ಕೆಲವು ಅಭ್ಯರ್ಥಿಗಳು ಈ ಅಧಿಸೂಚನೆಯನ್ನೇ ಮುಂದುವರೆಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ಹುದ್ದೆಗಳ ನೇಮಕಾತಿ ತಡವಾಗುತ್ತಿದೆ.

ʻಪಶು ವೈದ್ಯಾಧಿಕಾರಿಗಳ ನೇಮಕಾತಿ ವಿಚಾರ ಸದ್ಯ ಹೈಕೋರ್ಟ್‍ನಲ್ಲಿದೆ. ಹಾಗಾಗಿ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಹೈಕೋರ್ಟ್‍ನಲ್ಲಿರುವ ಪ್ರಕರಣವನ್ನು ಶೀಘ್ರವೇ ಇತ್ಯರ್ಥಪಡಿಸಿ ನಂತರ ಹುದ್ದೆಗಳನ್ನು ತುಂಬಲು ಅಧಿಸೂಚನೆಯನ್ನು ಹೊರಡಿಸಲಾಗುವುದು. ಕೆಪಿಎಸ್‍ಸಿಯಿಂದ ಹುದ್ದೆಗಳನ್ನು ಭರ್ತಿ ಮಾಡಲು ಚರ್ಚೆಗಳು ನಡೆಯುತ್ತಿವೆʻ

- ಕೆ.ವೆಂಕಟೇಶ್, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - -ಅನಿಲ್ ಕುಮಾರ್ ಎಂ.

contributor

Similar News