'ಕವಿ, ಬೈಕರ್, ಆಡಳಿತ ತಜ್ಞ': ಸಿದ್ದರಾಮಯ್ಯ ಬಜೆಟ್ ಹಿಂದಿನ ಅಧಿಕಾರಿ ಎಲ್.ಕೆ. ಅತೀಕ್

Update: 2024-02-17 11:48 GMT

ಎಲ್. ಕೆ. ಅತೀಕ್

ಬೆಂಗಳೂರು: ‘ಕವಿತೆಯ ಅನುಭವವು ಅರ್ಥಶಾಸ್ತ್ರಜ್ಞರ ಅಧ್ಯಯನವು ಏನನ್ನು ಒಳಗೊಂಡಿರಬೇಕು ಎನ್ನುವುದನ್ನು ಹೆಚ್ಚು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಅರ್ಥಶಾಸ್ತ್ರಜ್ಞನಿಗೆ ನೆರವಾಗುತ್ತದೆ’ ಎಂದು ಆಸ್ಟ್ರೇಲಿಯಾದ ಅರ್ಥಶಾಸ್ತ್ರಜ್ಞ ಬ್ರೆಂಡನ್ ಮಾರ್ಕ್-ಟೌಲರ್ ಬರೆದಿದ್ದಾರೆ.

ಈ ಮಾತು ವಿಶೇಷವಾಗಿ, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2024-25ನೇ ಸಾಲಿನ ಬಜೆಟ್ ರೂಪಿಸುವಲ್ಲಿ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಲುತ್ಫುಲ್ಲಾ ಖಾನ್ (ಎಲ್ ಕೆ) ಅತೀಕ್ ಅವರ ವಿಷಯದಲ್ಲಿ ಸತ್ಯವಾಗಿದೆ.

1965ರಲ್ಲಿ ಜನಿಸಿದ ಅತೀಕ್ ತುಮಕೂರು ಮೂಲದವರಾಗಿದ್ದಾರೆ. ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್ ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ಸದ್ಯ ರಾಜ್ಯದ ಮುಖ್ಯಮಂತ್ರಿಗಳ ಹಾಗೂ ವಿತ್ತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಉತ್ತಮ ಕನ್ನಡ, ಉರ್ದು ಲೇಖಕರೂ ಆಗಿದ್ದಾರೆ ಅತೀಕ್.

 

ಕೃಷಿ ಅರ್ಥಶಾಸ್ತ್ರದಲ್ಲಿ ಎಂ.ಎಸ್ಸಿ ವ್ಯಾಸಂಗವನ್ನು ಮಾಡಿರುವ ಅತೀಕ್ ಕಾವ್ಯದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದಾರೆ. ಅವರು ಉರ್ದು ಕವಿ ಫೈಝ್ ಅಹ್ಮದ್ ಫೈಜ್ ಅವರ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅವರು ರಾಷ್ಟ್ರಕವಿ ಕುವೆಂಪು ಅವರ ‘ಅನಿಕೇತನ’ ಕವಿತೆಯನ್ನೂ ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.

ಸ್ವಂತ ಕವನಗಳನ್ನೂ ರಚಿಸುವ ಅತೀಕ್ 1991ರಿಂದ 1993ರವರೆಗೆ ಮಸೂರಿಯಲ್ಲಿ ಐಎಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾಗ ಕವನ ರಚನೆಯನ್ನು ಅರಂಭಿಸಿದ್ದರು.

ಅಂಕಿಸಂಖ್ಯೆಗಳೊಂದಿಗೆ ಅಥವಾ ಕವನ ರಚನೆಯಲ್ಲಿ ವ್ಯಸ್ತರಾಗಿರದ ಸಮಯದಲ್ಲಿ ಅತೀಕ್ ತನ್ನ ಇನ್ನೊಂದು ಹವ್ಯಾಸಕ್ಕೆ ತೆರೆದುಕೊಳ್ಳುತ್ತಾರೆ, ಅದು ಬೈಕಿಂಗ್.

ಅತೀಕ್ ತನ್ನ ಟ್ರಯಂಫ್ ಬೋನ್ ವಿಲ್ ಬೋಬರ್ ಬೈಕ್ ನಲ್ಲಿ ಸಂಚರಿಸುವುದು ಆಗಾಗ್ಗೆ ಕಣ್ಣಿಗೆ ಬೀಳುತ್ತಿರುತ್ತದೆ. ಸ್ವಲ್ಪ ಸಮಯ ಅವರು ಬಾಲಿವುಡ್ ಚಿತ್ರ ‘ಶೋಲೆ’ಯಲ್ಲಿ ಬಳಸಲಾಗಿದ್ದ 1942ರ ಮಾಡೆಲ್ ನ ಬಿಎಸ್ಎ ಬೈಕ್ ಸವಾರಿ ಮಾಡಿದ್ದರು. ಅವರ ಸ್ನೇಹಿತರೋರ್ವರು ಈ ಬೈಕ್ ಅನ್ನು ಎರವಲು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News