ಸಿಎಂ ಸಂಧಾನ ಯಶಸ್ವಿ : ನಾಳೆ ಕರೆ ನೀಡಿದ್ದ ಮದ್ಯ ಮಾರಾಟ ಬಂದ್ ವಾಪಸ್

Update: 2024-11-19 12:48 GMT

ಬೆಂಗಳೂರು : ಭ್ರಷ್ಟಾಚಾರಕ್ಕೆ ಕಡಿವಾಣ, ಮದ್ಯ ಮಾರಾಟಗಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ(ನ.20) ‘ಫೆಡರೇಷನ್ ಆಫ್ ವೈನ್ಸ್ ಮರ್ಚಂಟ್ಸ್ ಅಸೋಸಿಯೇಷನ್’ ಕರೆ ನೀಡಿದ್ದ ಮದ್ಯ ಮಾರಾಟ ಬಂದ್ ಅನ್ನು ಸಿಎಂ ಸಂಧಾನದ ಹಿನ್ನೆಲೆಯಲ್ಲಿ ಹಿಂಪಡೆದಿದೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮದ್ಯ ಮಾರಾಟಗಾರರ ಎಲ್ಲ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಮದ್ಯ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರಕಾರಕ್ಕೆ ಆದಾಯ ತರುವಂತೆ ಕ್ರಮ ವಹಿಸಲಾಗುವುದು. ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗುವುದು’ ಎಂದು ಅಭಯ ನೀಡಿದರು.

‘ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ನಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ದೂರು ಕೊಟ್ಟವರಿಗೂ ನಮಗೂ ಯಾವುದೇ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲಿಸಿ, ತನಿಖೆ ನಡೆಸಿ’ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅಬಕಾರಿ ಇಲಾಖೆ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮಾರಾಟಗಾರರಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News