ಪ್ರಭಾಕರ್ ಭಟ್ ಅನ್ನು ನಾವು ಬಂಧಿಸಲ್ಲ ಎಂದು ಹೈಕೋರ್ಟ್ ಗೆ ಹೇಳಿದ ಕರ್ನಾಟಕ ಸರಕಾರ!
Update: 2023-12-28 14:13 GMT
ಬೆಂಗಳೂರು : ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಮೊಕದ್ದಮೆ ರದ್ದತಿ ಕೋರಿ ಅರ್ಜಿಯ ವಿಚಾರಣೆ ವೇಳೆ, ಪ್ರಭಾಕರ್ ಭಟ್ ರನ್ನು ನಾವು ಬಂಧಿಸುವುದಿಲ್ಲ ಎಂದು ಸರಕಾರದ ಪರವಾಗಿ ಹಾಜರಿದ್ದ ವಕೀಲರು ಹೈಕೋರ್ಟ್ ಗೆ ತಿಳಿಸಿದ ಘಟನೆ ಗುರುವಾರ ವರದಿಯಾಗಿದೆ.
ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ, ಹೈಕೋರ್ಟ್ ನಲ್ಲಿ ಮೊಕದ್ದಮೆ ರದ್ದತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ವೇಳೆ ಪ್ರಭಾಕರ್ ಭಟ್ ಪರ ವಕೀಲರು, ಇದು ರಾಜಕೀಯ ಪ್ರೇರಿತ ದೂರು. ಆರೋಪಿ ವಯೋ ವೃದ್ದರು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಬಂಧಿಸುವ ಸಾಧ್ಯತೆಯಿದೆ. ಹಾಗಾಗಿ ಎಫ್ಐಆರ್ ಗೆ ತಡೆ ನೀಡಬೇಕು ಎಂದು ವಾದ ಮಂಡಿಸಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರ ಪರ ವಕೀಲ ಎಸ್ ಬಾಲನ್ ಅವರು, “ಆರೋಪಿ ಹೇಳಿಕೆಯನ್ನು ನ್ಯಾಯಾಲಯ ಗಮನಿಸಬೇಕು. ಮುಸ್ಲಿಂ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿದೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಮಾಡಿದ್ದಾನೆ. ಹಾಗಾಗಿ ಕಾನೂನು ಅದರ ಕೆಲಸ ಮಾಡಲಿ” ಎಂದರು.
ಪ್ರಭಾಕರ ಭಟ್ ಪರ ವಕೀಲರು, “ಮುಂದಿನ ದಿನಾಂಕದ ವರೆಗೆ ಬಂಧಿಸದಂತೆ ನಿರ್ದೇಶನ ಕೊಡಿ. ಪ್ರಭಾಕರ ಭಟ್ ವಿರುದ್ದ ಸರ್ಕಾರ ರೌಡಿ ಶೀಟ್ ತೆರೆಯುವ ಸಾಧ್ಯತೆಯಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ವಾದ ಮಂಡಿಸಿದ ದೂರುದಾರರ ಪರ ವಕೀಲ ಎಸ್ ಬಾಲನ್, “ಆರೋಪಿ ಪ್ರಭಾಕರ ಭಟ್ ವಿರುದ್ದ ರೌಡಿಶೀಟ್ ಮಾತ್ರವಲ್ಲ, ಯುಎಪಿಎ ಸೇರಿದಂತೆ ದೇಶದ್ರೋಹದ ಕೇಸು ಹಾಕಬೇಕು. ಸಮಾಜದಲ್ಲಿ ಭಯವನ್ನು ಉತ್ಪಾದಿಸುವ ಭಯೋತ್ಪಾದಕರು ಇವರು. ಸುಪ್ರಿಂ ಕೋರ್ಟ್ ಈ ರೀತಿ ದ್ವೇಷಭಾಷಣ ಮಾಡುವವರ ವಿರುದ್ದ ಹಲವು ತೀರ್ಪು ಕೊಟ್ಟಿದೆ. ಈಗ ಆರೋಪಿ ಬಗ್ಗೆ ಇನ್ನಷ್ಟೂ ತನಿಖೆ ಆಗಬೇಕಿದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದೆ ಕೋಮುಗಲಭೆಯ ಹುನ್ನಾರ ಇದೆ. ಹಾಗಾಗಿ ಇದು ಸರಳ ಪ್ರಕರಣ ಅಲ್ಲ” ಎಂದು ಪ್ರಕರಣದ ಗಂಭೀರತೆಯ ಬಗ್ಗೆ ಗಮನ ಸೆಳೆದರು.
ಸರಕಾರದ ಪರವಾಗಿ ಹಾಜರಿದ್ದ ವಕೀಲರು, “ಈ ಪ್ರಕರಣದಲ್ಲಿ ನಾವು ಪ್ರಭಾಕರ ಭಟ್ಟರನ್ನು ಬಂಧಿಸಲ್ಲ. ಹಾಗಾಗಿ ವಿಚಾರಣೆಗೆ ಮುಂದಿನ ದಿನಾಂಕ ಕೊಡಿ” ಎಂದು ನ್ಯಾಯಾಲಯದ ಗಮನ ಸೆಳೆದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಕೂಡಲೇ, ” ಸರ್ಕಾರವೇ ಆರೋಪಿಯನ್ನು ಬಂಧಿಸಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತಡೆ ನೀಡುವ ಅಗತ್ಯ ಇಲ್ಲ” ಎಂದರು.
ದೂರುದಾರರ ಪರ ವಕೀಲ ಬಾಲನ್ ಅವರು, “ಆರೋಪಿಯನ್ನು ಬಂಧಿಸಿ ತನಿಖೆ ನಡೆಸುವ ಅಗತ್ಯ ಇದೆ. ಆರೋಪಿ ಕೋಮುಗಲಭೆ ಮಾಡುವ ಹುನ್ನಾರ ಹೊಂದಿದ್ದಾನೆ” ಎಂದರು. ಆಗ ನ್ಯಾಯಾಧೀಶರು, “ಸರ್ಕಾರಕ್ಕೆ ಬಂಧನದ ಅಗತ್ಯ ಇಲ್ಲ ಅಂದ ಮೇಲೆ ಈ ವಿಚಾರದಲ್ಲಿ ಚರ್ಚೆ ಬೇಡ” ಎಂದು ವಿಚಾರಣೆಯನ್ನು ಜನವರಿ 09, 2024 ಕ್ಕೆ ಮುಂದೂಡಿದರು.
ಮಾಹಿತಿ ಕೃಪೆ : ನವೀನ್ ಸೂರಿಂಜೆ