ಮಂಡ್ಯ| ಧರಣಿ ನಡೆಸುತ್ತಿದ್ದ ಗಾರ್ಮೆಂಟ್ ನೌಕರರನ್ನು ದಿಗ್ಬಂಧನಕ್ಕೊಳಪಡಿಸಿದ ಆಡಳಿತ ಮಂಡಳಿ; ಆರೋಪ

Update: 2023-11-09 18:39 GMT

ಮಂಡ್ಯ: ತಮ್ಮ ಹಕ್ಕು ಪ್ರತಿಪಾದಿಸಿ ಪ್ರತಿಭಟನೆ ನಡೆಸುತ್ತಿದ್ದ ನೌಕರರನ್ನು ಕಾರ್ಖಾನೆ ಆಡಳಿತ ಮಂಡಳಿ ಗಾರ್ಮೆಂಟ್ಸ್ ಆವರಣದಲ್ಲಿ ದಿಗ್ಬಂಧನಕ್ಕೆ ಒಳಪಡಿಸಿದ್ದಾರೆನ್ನಲಾದ ಘಟನೆ ಗರುವಾರ ಮದ್ದೂರು ತಾಲೂಕು ಗೆಜ್ಜಲಗೆರೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಕೈಗಾರಿಕಾ ಪ್ರದೇಶದಲ್ಲಿರುವ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಪಿಎಫ್, ಇಎಸ್‍ಐ, ಬೋನಸ್ ಪಾವತಿಗಾಗಿ ಗಾರ್ಮೆಂಟ್ಸ್‍ನ ಸುಮಾರು 350 ಮಹಿಳಾ ಉದ್ಯೋಗಿಗಳು ಗಾರ್ಮೆಂಟ್ಸ್ ಎದುರು ಧರಣಿ ನಡೆಸುತ್ತಿದ್ದರು. ಉದ್ಯೋಗಿಗಳನ್ನು ಆಡಳಿತ ಮಂಡಳಿ ಅಲ್ಲಿಯೇ ಕೂಡಿ ಹಾಕಿತ್ತು ಎಂದು ಆರೋಪಿಸಲಾಗಿದೆ.

ವಿಷಯ ತಿಳಿದ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಮದ್ದೂರು ತಾಲೂಕು ಅಧ್ಯಕ್ಷ ನಗರಕೆರೆ ಜಗದೀಶ್, ಮಹಿಳಾ ಮುನ್ನಡೆಯ ಶಿಲ್ಪ ಸ್ಥಳಕ್ಕೆ ತೆರಳಿದಾಗ, ಅವರನ್ನು ಗಾರ್ಮೆಂಟ್ಸ್ ಆವರಣಕ್ಕೆ ಹೋಗುವುದಕ್ಕೆ ತಡೆಯೊಡ್ಡಲಾಯಿತು.

ಕೂಡಲೇ ಸಂಘಟನೆಯ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ಯತೀಶ್ ಅವರ ಸೂಚನೆಯ ಮೇರೆಗೆ ಮದ್ದೂರಿನ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೂಡಿ ಹಾಕಿದ್ದ ನೌಕರರನ್ನು ಬಿಡುಗಡೆಗೊಳಿಸಿದರು.

ಈ ಸಂಬಂಧಪಟ್ಟಂತೆ ನಾಳೆ(ನ.10) ಸಂಘಟನೆಗಳು ಮುಖಂಡರು ಹಾಗೂ ಕಾರ್ಮಿಕ ಅಧಿಕಾರಿಗಳು ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ಮುಂದುವರಿಸುವುದಾಗಿ ನೌಕರರು ಮತ್ತು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

“ನೌಕರರಿಗೆ ಭವಿಷ್ಯ ನಿಧಿ, ಇಎಸ್‍ಐ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿ, ಸುರಕ್ಷತೆ ನೀಡದೆ ದುಡಿಸಿಕೊಳ್ಳುತ್ತಿರುವ ಬಾಲಾಜಿ ಗಾಮೆಂಟ್ಸ್ ಮಾಲಕರ ವಿರುದ್ಧ ಕಾನೂನು ಕ್ರಮ ಜರಿಗಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.”

-ಸಿ.ಕುಮಾರಿ, ಸಿಐಟಿಯು, ಪ್ರಧಾನ ಕಾರ್ಯದರ್ಶಿ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News