ಬರಪರಿಹಾರಕ್ಕೆ ಕೇಂದ್ರ ನೀಡಿದ ಹಣ ಸಾಲದು, ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ : ಸಿಎಂ ಸಿದ್ದರಾಮಯ್ಯ

Update: 2024-04-27 07:59 GMT

ಬೆಂಗಳೂರು : ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿರುವ ಅವರು, "ಎನ್.ಡಿ.ಆರ್.ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ರೂ. ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ರೂ. 3498.98 ಕೋಟಿ ನೀಡಿದೆ. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ತಿಳಿಸಿದರು

"ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಕಾಳಜಿಯಿಂದ ಈ ಬರ ಪರಿಹಾರ ನೀಡಿಲ್ಲ. ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರವು ರಾಜಕೀಯ ದುರುದ್ದೇಶದಿಂದ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ. ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು ಮೋದಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಈ ಪರಿಹಾರ ನೀಡಿದೆ"ಎಂದು ಹೇಳಿದರು.

"ಬರಪರಿಹಾರ ಬಿಡುಗಡೆಯಲ್ಲಿ ರಾಜ್ಯ ಬಿಜೆಪಿ ನಾಯಕರದ್ದಾಗಲೀ, ಕೇಂದ್ರ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಇದು ಕೃಷಿ ಕ್ಷೇತ್ರ ಮತ್ತು ರಾಜ್ಯದ ರೈತರ ಮೇಲೆ ಸುಪ್ರೀಂಕೋರ್ಟ್ ಇಟ್ಟುಕೊಂಡಿರುವ ಕಾಳಜಿಯ ಫಲ. ಸ್ವಲ್ಪವಾದರೂ ಪರಿಹಾರವನ್ನು ನೀಡದೆ ಇದ್ದರೆ ರೊಚ್ಚೆದ್ದಿರುವ ಕರ್ನಾಟಕದ ಜನ ಚುನಾವಣಾ ಪ್ರಚಾರಕ್ಕಾಗಿ ತಮ್ಮನ್ನು ರಾಜ್ಯಕ್ಕೆ ಕಾಲಿಡಲು ಬಿಡಲಾರರು ಎಂಬ ಭಯವೂ ಈ ಪರಿಹಾರ ಘೋಷಿಸಲು ಕಾರಣವಾಗಿದೆ. ಈ ಅಲ್ಪ ಪರಿಹಾರವನ್ನು ತಮ್ಮ ಸಾಧನೆ ಎಂದು ರಾಜ್ಯದ ಬಿಜೆಪಿ ನಾಯಕರು ಬಿಂಬಿಸಲು ಹೊರಟರೆ ರಾಜ್ಯದ ಜನೆ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡುತ್ತೇನೆ"  ಎಂದರು.

ʼಈ ಬರ ಪರಿಹಾರ ಬಿಡುಗಡೆಯ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತಿದ್ದೇನೆ. ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡಾ ಕೇಂದ್ರ ಸರ್ಕಾರ ಸರಿಪಡಿಸಬೇಕೆಂದುʼ ಅವರು ಆಗ್ರಹಿಸಿದರು.

ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ನಾವು 13-9-2024ರಂದು ಘೋಷಿಸಿದ್ದೆವು. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ನಾವು ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು. ಅಂದರೆ ರೂ.18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೆ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ರೂ.3498.98 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News