ಕಾಂಗ್ರೆಸ್​​ ಎರಡನೇ ಪಟ್ಟಿಯಲ್ಲಿ 17 ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, 4 ಕ್ಷೇತ್ರಗಳು ಬಾಕಿ ಇದೆ : ಡಿ.ಕೆ ಶಿವಕುಮಾರ್​

Update: 2024-03-20 17:29 GMT

ಹೊಸದಿಲ್ಲಿ: " ಕಾಂಗ್ರೆಸ್​​ ಎರಡನೇ ಪಟ್ಟಿಯಲ್ಲಿ 17 ಅಭ್ಯರ್ಥಿಗಳ ಹೆಸರು ಇಂದು ಅಂತಿಮವಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

 ಬುಧವಾರ ನಡೆದ ಸಿಇಸಿ ಸಭೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, "ಅಂತಿಮ ನಾಲ್ಕು ಕ್ಷೇತ್ರಗಳಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು. ನಾಳೆ ಈ ಕ್ಷೇತ್ರಗಳ ಸ್ಥಳೀಯ ನಾಯಕರ ಸಭೆ ಕರೆಯಲಾಗಿದೆ. ನಂತರ ನಾಡಿದ್ದು ಝೋಮ್‌ ಕಾಲ್ ಮೂಲಕ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

ಶೇ.50 ಟಿಕೆಟ್ ಯುವಕರಿಗೆ ನೀಡಿದ್ದೇವೆ:

 "ರಾಜಕೀಯ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವವರಿಗೂ ಹೊಸ ಅಭ್ಯರ್ಥಿಗಳನ್ನು ತರುವುದಕ್ಕೂ ವ್ಯತ್ಯಾಸವಿದೆ. ಇಡೀ ದೇಶದಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಶೇ.50ರಷ್ಟು ಯುವಕರಿಗೆ ಅವಕಾಶ ನೀಡಿದ್ದೇವೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ಇದು ದೊಡ್ಡ ಬದಲಾವಣೆ. ನಾವು ವಿದ್ಯಾವಂತ ಯುವಕರಿಗೆ ಅವಕಾಶ ನೀಡಿದ್ದೇವೆ. ಎಲ್ಲರೂ ಸಮರ್ಥರಿದ್ದು, ಎಲ್ಲರ ಮೇಲೂ ಹೊಣೆಗಾರಿಕೆ ಇದೆ" ಎಂದು ತಿಳಿಸಿದರು.

ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಬಗ್ಗೆ ಕೇಳಿದಾಗ, "ಆ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ. ಬೇರೆ ಪಕ್ಷಗಳ ಬಗ್ಗೆ ಮಾತನಾಡಿಲ್ಲ. ಬಿಜೆಪಿಯಲ್ಲಿ ಅನೇಕರಿಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳು ತೋರಿಸುತ್ತಿವೆ. ಮುಂದೆ ಕಾಲ ಉತ್ತರಿಸುತ್ತದೆ" ಎಂದು ತಿಳಿಸಿದರು.

ಹಳೇ ಫೋಟೋ ಇಟ್ಟುಕೊಂಡು ಈಗ ಮಾತಾಡುತ್ತಿದ್ದಾರೆ:

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ ಹಂಚಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ನಾವು ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಜನರಿಗೆ ಅನೇಕ ಬಾರಿ ಸಹಾಯ ಮಾಡಿದ್ದೇವೆ. ಹಳೆಯ ಫೋಟೋ ಇಟ್ಟುಕೊಂಡು ಈಗ ನೀಡುತ್ತಿರಬಹುದು. ಅವರು ಬಹಳ ಪ್ರಾಮಾಣಿಕರು. ನಾನು ನನ್ನ ಮಗಳ ಮದುವೆ ಸಂದರ್ಭದಲ್ಲಿ ಎಲ್ಲರಿಗೂ ಸೀರೆ ಬಟ್ಟೆ ಕೊಟ್ಟಿದ್ದೇನೆ. ಕನಕೊತ್ಸವ ಮಾಡಿದಾಗ ಸಿಹಿ ಹಂಚಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆ ನೀಡಿದ್ದೇವೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ನೀಡಿದ್ದೇವೆ. ಜನರಿಗೆ ನಾವು ಅನೇಕ ಬಾರಿ ಸಹಾಯ ಮಾಡಿದ್ದೇವೆ. ಚುನಾವಣಾ ನೀತಿ ಸಂಹಿತೆಗೂ ಮುನ್ನ ರಮಝಾನ್ ಹಬ್ಬದ ಸಂದರ್ಭದಲ್ಲಿ ನಾವು ಉಡುಗೊರೆ ನೀಡುತ್ತಾ ಬಂದಿದ್ದೇವೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News