ಬೆಂಗಳೂರು ನಗರದಲ್ಲಿ ಮತದಾರರ ಸಂಖ್ಯೆ 97,09,499ಕ್ಕೆ ಏರಿಕೆ
ಬೆಂಗಳೂರು, ಅ.27: ನಗರ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲಿ 50,61,883 ಪುರುಷ ಮತದಾರರು, 47,26,856 ಮಹಿಳೆ ಮತದಾರರು ಮತ್ತು 1760 ಇತರೆ ಮತದಾರರು ಇದ್ದಾರೆ. ಒಟ್ಟಾರೆ 97,09,499 ಅರ್ಹ ಮತದಾರರ ಕರಡನ್ನು ಅನುಮೋದಿಸಲಾಗಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್.ರಾಮಚಂದ್ರನ್ ಹೇಳಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅ.27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಕರಡು ಪ್ರತಿಯನ್ನು ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ಸಿಇಓ ಕರ್ನಾಟಕ ವೆಬ್ ತಾಣವಾದ www.ceokarnataka.kar.nic.in ಮತ್ತು ಬಿಬಿಎಂಪಿಯ www.bbmp.gov.inwebsite ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಆನ್‍ಲೈನ್ ಮೂಲಕ ಮಾಹಿತಿ: ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್ ನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ ಅಥವಾ ವೆಬ್ ಪೋರ್ಟಲ್ Voters.eci.gov.in ಮೂಲಕ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಇನ್ನಿತರ ಮಾಹಿತಿಗಳಾದ ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ತಿದ್ದುಪಡಿಗೆ ಡಿ.9 ಕೊನೆಯ ದಿನ: ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತದಾರರು ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ನೊಂದಣಾಧಿಕಾರಿಗಳ ಕಛೇರಿ, ವಾರ್ಡ್ ಕಛೇರಿ ಹಾಗೂ ಬಿ.ಎಲ್.ಓ ಗೆ ನಮೂನೆ-6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ಇಂದಿನಿಂದ ಡಿಸೆಂಬರ್ 9 ರವರಗೆ ಅವಕಾಶವನ್ನು ಕಲ್ಪಿಸಿದೆ ಎಂದು ಆರ್. ರಾಮಚಂದ್ರನ್ ಮಾಹಿತಿ ನೀಡಿದರು.
ಮತಗಟ್ಟೆಗಳ ಹೆಚ್ಚಳ: ಈ ಹಿಂದೆ ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ರವರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 8615 ಮತಗಟ್ಟೆಗಳಿತ್ತು. ಆದರೆ ಈ ಬಾರಿ ಹೆಚ್ಚಿಸಿ 8,982 ಮತಗಟ್ಟೆಗಳನ್ನು ನಿಗದಿ ಮಾಡಲಾಗಿದೆ. ನಾಲ್ಕು ಅರ್ಹತಾ ದಿನಾಂಕಗಳನ್ನು (1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್) ನಿಗದಿಪಡಿಸಲಾಗಿದೆ. ಯುವ (18-19) ಆರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಅನುಕೂಲವಾಗಲಿದೆ. 17 ವರ್ಷ ತುಂಬಿದವರು ಈಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್, ಡಾ. ದಾಕ್ಷಾಯಿಣಿ, ಡಾ. ಕೆ. ಜಗದೀಶ್ ನಾಯ್ಕ್, ಚುನವಾವಣಾ ವಿಭಾಗದ ವಿಶೇಷ ಆಯುಕ್ತ ಅಜಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.