ಕಾಡಾನೆಯ ಸೆರೆಗೆ ಕಾರ್ಯಾಚರಣೆ ಆರಂಭ: ಸಕ್ರೆಬೈಲು, ನಾಗರಹೊಳೆಯಿಂದ ಕಾಫಿನಾಡಿಗೆ ಬಂದ 6 ಸಾಕಾನೆಗಳು

Update: 2023-11-09 18:33 GMT

ಚಿಕ್ಕಮಗಳೂರು: ತಾಲೂಕಿನ ಹೆಡದಾಳು ಗ್ರಾಮದಲ್ಲಿ ಬುಧವಾರ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ಗುರುವಾರ ಕಾಡಾನೆ ಸೆರೆಗೆ ಕಾರ್ಯಾಚರಣೆಯನ್ನು ಆರಂಭಿಸಿದೆ.

ಕಾರ್ಯಚರಣೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ಮತ್ತು ನಾಗರಹೊಳೆ ದುಬಾರೆಯಿಂದ ಮೂರು ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಸಕ್ರೆಬೈಲಿನಿಂದ ಈಗಾಗಲೇ ಮೂರು ಸಾಕಾನೆಗಳು ಆಗಮಿಸಿದ್ದು, ದುಬಾರೆ ಆನೆ ಬಿಡಾರದಿಂದ ಮೂರು ಆನೆಗಳನ್ನು ಕಾಫಿನಾಡಿನತ್ತಾ ಆಗಮಿಸುತ್ತಿವೆ. ನರಹಂತಕ ಕಾಡಾನೆಯ ಪತ್ತೆಗೆ ಕೂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ಪ್ರಾರಂಭಿಸಿದೆ.

ಬುಧವಾರ ಜಿಲ್ಲೆಯ ಆಲ್ದೂರು ಸಮೀಪದ ಹೆಡದಾಳು ಕಾಫಿತೋಟದಲ್ಲಿ ಗಾಳಿಗಂಡಿ ಗ್ರಾಮದ ಮಹಿಳೆ ಮೀನಾ ಅವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಕಳೆದ ಕೆಲವು ತಿಂಗಳ ಹಿಂದೆ ಆಲ್ದೂರು ಸಮೀಪದ ಅರೇನೂರು ಬಳಿ ಚಿನ್ನಿ ಎಂಬವರನ್ನು ಬಲಿ ಪಡೆದಿತ್ತು. ಈ ಆನೆ ಕಾಡಾನೆಗಳ ಗುಂಪಿನಲ್ಲಿ ಆಲ್ದೂರು ಸುತ್ತಮುತ್ತಲ ಗ್ರಾಮಗಳಲ್ಲಿ ರೈತರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯನ್ನೂ ಮಾಡಿತ್ತು. ಪರಿಣಾಮ ಕಾಡಾನೆಗಳ ಕಾಟದಿಂದ ಬೇಸತ್ತ ರೈತರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಡಾನೆಗಳ ಸೆರೆಗೆ ಮನವಿ ಮಾಡಿದ್ದರು.

ಬುಧವಾರ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಕಾರ್ಮಿಕ ಮಹಿಳೆ ಮೀನಾ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಆಲ್ದೂರು ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಹಾಗೂ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪುಂಡಾಟ ಮೆರೆಯುತ್ತಿರುವ ನರಹಂತಕ ಆನೆಯನ್ನು ಸೆರೆ ಹಿಡಿಯಲು ಇನ್ನೇಷ್ಟು ಬಲಿ ಬೇಕು. ಈ ಆನೆಗಳನ್ನು ಗುಂಡಿಟ್ಟು ಸಾಯಿಸಿ ಎಂದು ಸಿಟ್ಟು ಹೊರ ಹಾಕಿದ್ದರು.

ಇದೇ ವೇಳೆ ಡಿ.ಬಿ.ಚಂದ್ರೇಗೌಡ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾಕಾರರ ಜೊತೆ ದೂರವಾಣಿ ಮೂಲಕ ಮಾತನಾಡಿ, ಆನೆ ಸೆರೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಹಾಗೂ ಜಿ.ಪಂ ಸಿಇಓ ಡಾ.ಬಿ.ಗೋಪಾಲಕೃಷ್ಣ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆನೆ ಸೆರೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಲ್ದೂರು ಭಾಗದಲ್ಲಿ ಜನರ ಆತಂಕಕ್ಕೆ ಕಾರಣವಾಗಿರುವ ನರಹಂತಕ ಒಂಟಿ ಸಲಗವನ್ನು ಸೆರೆ ಹಿಡಿಯಲು ಆದೇಶಿಸಿದ್ದಾರೆ.

ಪುಂಡಾಟ ಮೆರೆಯುತ್ತಿರುವ 7 ಕಾಡಾನೆಳಿರುವ ಗುಂಪು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಲಗ್ಗೆ ಇಟ್ಟು ಕಾಫಿತೋಟ, ಜಮೀನು, ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ. ಜೊತೆಗೆ ಕಾರ್ಮಿಕರ ಬಲಿ ಪಡೆಯುತ್ತಿವೆ. 7 ಆನೆಗಳ ಗುಂಪಿನಲ್ಲಿರುವ ಒಂದು ಸಲಗ ಮನುಷ್ಯರನ್ನು ಕಂಡೊಂಡನೇ ಅವರ ಮೇಲೆ ದಾಳಿಗೆ ಮುಂದಾಗುತ್ತಿದೆ. ಇತ್ತೀಚೆಗೆ ಆನೆಗಳನ್ನು ಕಾಡಿಗಟ್ಟಲು ಮುಂದಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದು, ಸಿಬ್ಬಂದಿಯೊಬ್ಬರು ಆನೆಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿತ್ತು.

ನರಹಂತಕ ಆನೆಯನ್ನು ಸೆರೆ ಹಿಡಿಯಲು ಮತ್ತು ಉಳಿದ ಆನೆಗಳನ್ನು ಕಾಡಿಗಟ್ಟುವ ಸಲುವಾಗಿ ಅರಣ್ಯ ಇಲಾಖೆ ಕೇಂದ್ರ ಕಚೇರಿಗೆ ಪತ್ರ ವ್ಯವಹಾರ ನಡೆಸಿತ್ತು. ಅಷ್ಟರಲ್ಲಿ ಯುವತಿಯನ್ನು ನರಹಂತಕ ಆನೆ ಬಲಿ ಪಡೆದಿದ್ದು, ಜನಾಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದ್ದು, ಸಕ್ರೆಬೈಲಿನಿಂದ ಮೂರು ಆನೆಗಳನ್ನು ಕರೆಸಿಕೊಳ್ಳಲಾಗಿದ್ದು, ನಾಗರಹೊಳೆ ದುಬಾರೆಯಿಂದ ಮೂರು ಆನೆಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಗುರುವಾರದಿಂದ ಆಲ್ದೂರು ಭಾಗದಲ್ಲಿ ನರಹಂತಕ ಆನೆಯ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News