ವಿಧಾನಸಭೆಯಲ್ಲಿ ಮೊದಲ ಬಾರಿಗೆ ‘ಸಂವಿಧಾನದ ಪೀಠಿಕೆ’ ಓದಿದ ಸ್ಪೀಕರ್‌

Update: 2023-12-04 13:52 GMT

ಬೆಳಗಾವಿ: ವಿಧಾನಸಭೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಧಾನಸಭೆ ಕಲಾಪ ಆರಂಭದಲ್ಲೇ ಸ್ಪೀಕರ್ ಯು.ಟಿ.ಖಾದರ್ ಅವರು ‘ಭಾರತದ ಸಂವಿಧಾನ’ ಪ್ರಸ್ತಾವನೆಯನ್ನು ಓದುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಸೋಮವಾರ ಬೆಳಗ್ಗೆ ನಿಗದಿತ ಅವಧಿಗಿಂತ ಒಂದು ಗಂಟೆ ವಿಳಂಬವಾಗಿ ಸದನ ವಂದೇ ಮಾತರಂನೊಂದಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಸಂವಿಧಾನದ ಮೂಲಪ್ರತಿಯನ್ನು ಓದಲಾಗುತ್ತದೆಯೋ ಅಥವಾ ತಿದ್ದುಪಡಿ ಮಾಡಲಾದ ಮಾಹಿತಿಯನ್ನೋ’? ಎಂದು ಪ್ರಶ್ನಿದರು. ‘ತಮಗೆ ಸಂವಿಧಾನದ ಪ್ರಸ್ತಾವನೆಯ ಪ್ರತಿಯೇ ತಲುಪಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ‘ನಾನು ಸಂವಿಧಾನದ ಪ್ರಸ್ತಾವನೆ ಓದುತ್ತೇನೆ, ನೀವು ಅದರಂತೆ ಹೇಳಿ’ ಎಂದು ಹೇಳಿದರು, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪ್ರಸ್ತಾವನೆಯ ಪ್ರತಿಯನ್ನು ತಲುಪಿಸಲು ಮಾರ್ಷಲ್‍ಗಳಿಗೆ ಸೂಚಿಸಿದರು.

ಬಳಿಕ ‘ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಅದರ ಸಮಸ್ತ ನಾಗರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ ಅಭಿವ್ಯಕ್ತಿ ವಿಶ್ವಾಸ ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನದ ಸಭೆಯಲ್ಲಿ 1949ನೆಯ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿ ಅನಿಯಮಿಸಿ ಅರ್ಪಿಸಿಕೊಂಡಿದ್ದೇವೆ’ ಎಂದು ಸ್ಪೀಕರ್ ಖಾದರ್ ಸಂವಿಧಾನದ ಪ್ರಸ್ತಾವನೆ ಓದಿ ಹೇಳಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಎದ್ದು ನಿಂತು ಸಂವಿಧಾನದ ಪೀಠಿಕೆಯನ್ನು ಓದಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News