ರಾಜ್ಯ ಕಾಂಗ್ರೆಸ್ ಸರಕಾರ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಧಿಕಾರ ಪಡೆದಿದೆ : ಬಿ.ವೈ.ವಿಜಯೇಂದ್ರ

Update: 2024-03-25 09:58 GMT

ಬೆಂಗಳೂರು: ಕರ್ನಾಟಕ ರಾಜ್ಯವು ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರುಜುವಾತು ಮಾಡಬೇಕಿದೆ. ಇದಕ್ಕಾಗಿ ನಮ್ಮೆಲ್ಲರ ಶ್ರಮ ಅತ್ಯಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಸೋಮವಾರ ನಗರದ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಏರ್ಪಡಿಸಿದ ಬಿಜೆಪಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಾರಾತ್ಮಕ ಅಂಶಗಳನ್ನು ಜನರ ಮುಂದಿಡಿ. ಬಡವರು, ರೈತರು, ಮಹಿಳೆಯರು, ಯುವಜನತೆ ಎಂಬ 4 ವರ್ಗಗಳ ಜನರನ್ನು ನಾವು ತಲುಪಿ ಮೋದಿಯವರ ಸಾಧನೆಗಳನ್ನು ತಲುಪಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಯ ಬ್ರಹ್ಮಾಸ್ತ್ರ ನಮ್ಮಲ್ಲಿದೆ. ಆ ಮೂಲಕ ಬಿಜೆಪಿ- ಜೆಡಿಎಸ್ ದಾಖಲೆಯ ಗೆಲುವು ಸಾಧಿಸಲು ಶ್ರಮಿಸಬೇಕು ಎಂದರು.

ಮುಂದಿನ ಲೋಕಸಭಾ ಚುನಾವಣೆಯು ಈ ದೇಶದ ಭವಿಷ್ಯವನ್ನು ರೂಪಿಸಲಿದೆ. ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಗ್ಗಟ್ಟಾಗಿ ಶ್ರಮ ಹಾಕಿದರೆ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಿದೆ. ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ದೇಶದ ವಿರೋಧ ಪಕ್ಷಗಳು ಈಗಾಗಲೇ ತೀರ್ಮಾನ ಮಾಡಿವೆ. ಆದರೂ, ನಾವು ಚುನಾವಣೆಯನ್ನು ಸವಾಲಾಗಿ, ಗಂಭೀರವಾಗಿ ಸ್ವೀಕರಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ 58 ಸಾವಿರ ಬೂತ್‍ ಗಳನ್ನು ನೇರವಾಗಿ ತಲುಪಬೇಕಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಧಿಕಾರ ಪಡೆದಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ತಪ್ಪು ನರೇಟಿವ್ ಅನ್ನು ಕಾಂಗ್ರೆಸ್ ಪಕ್ಷ ಮುಂದಿಟ್ಟಿತ್ತು ಎಂದು ವಿಶ್ಲೇಷಿಸಿದರು.

ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಪ್ರೀತಮ್ ಗೌಡ, ರಾಜ್ಯ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯಕ್, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ, ಪ್ರಕೋಷ್ಟಗಳ ರಾಜ್ಯ ಸಂಚಾಲಕ ಎಸ್. ದತ್ತಾತ್ರಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಮತ್ತು ಅಪೇಕ್ಷಿತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News