ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದೆ:‌ ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ

Update: 2024-03-13 12:47 GMT

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ನಾಡಿನ ಜನರ ಕಲ್ಯಾಣಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು 1,460 ಕೋಟಿ ರೂ.ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂ. ಪಡೆಯುತ್ತಿದ್ದಾರೆ. 5.28 ಲಕ್ಷ ಮನೆಗಳಲ್ಲಿ ಗೃಹ ಜ್ಯೋತಿಯ ಬೆಳಕು ಕಾಣುತ್ತಿದೆ. 4.91 ಲಕ್ಷ ಪಡಿತರ ಕುಟುಂಬಗಳು ಅನ್ನ ಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ದಿನ 1.57 ಲಕ್ಷ ಮಹಿಳೆಯರು ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಾದ್ಯಂತ 1.40 ಲಕ್ಷ ಜನ ಯುವ ನಿಧಿಯಡಿ ನಿರುದ್ಯೋಗ ಭತ್ತೆ ಪಡೆಯುತ್ತಿದ್ದಾರೆ. ಇದೆಲ್ಲವು ಬಡವರ ಕಲ್ಯಾಣಕ್ಕೆ ರೂಪಿಸಿರುವ ನಮ್ಮ ಸರಕಾರದ ಜನಪರ ಯೋಜನೆಗಳಾಗಿವೆ. 2013ರಲ್ಲಿ ಅಂದಿನ ಯು.ಪಿ.ಎ. ಸರಕಾರ ಈ ಭಾಗಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ಕಲಂ ಜಾರಿಗೆ ತಂದ ಪರಿಣಾಮ ಇಂದಿಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ರಾಜ್ಯ ಸರಕಾರ 371ಜೆ ಮೀಸಲಾತಿಯಡಿ ಈಗಾಗಲೆ 15 ಸಾವಿರ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ತಾವು ರೈಲ್ವೆ ಸಚಿವರಾಗಿದ್ದ 11 ತಿಂಗಳ ಅಲ್ಪ ಅವಧಿಯಲ್ಲಿಯೆ 27 ರೈಲು ಓಡಿಸಿದೆ. ಕಲಬುರಗಿ-ಹುಬ್ಬಳ್ಳಿ, ಹುಬ್ಬಳ್ಳಿ-ಹೈದರಾಬಾದ್, ಹುಬ್ಬಳ್ಳಿ-ಮುಂಬೈ, ಕಲಬುರಗಿ-ಬೀದರ್ ಹೀಗೆ ಅನೇಕ ರೈಲುಗಳನ್ನು ಆರಂಭಿಸಲಾಯಿತು. ಕಾರ್ಮಿಕ ಸಚಿವನಾಗಿದ್ದಾಗ ಇ.ಎಸ್.ಐ.ಸಿ. ಆಸ್ಪತ್ರೆ ಆರಂಭಿಸಿದೆ. ಸಿ.ಯು.ಕೆ. ಸ್ಥಾಪಿಸಲಾಯಿತು ಎಂದು ಅವರು ಹೇಳಿದರು.

ನನ್ನನ್ನು ಟೀಕಿಸಿದ ವಿರೋಧ ಪಕ್ಷದವರ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಆದರೆ, ಇಂದು ಅಧಿಕಾರದಲ್ಲಿರುವ ಕೇಂದ್ರ ಸರಕಾರ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಯಾವುದೇ ಕೊಡುಗೆ ನೀಡದೆ ಸುಳ್ಳು ಭರವಸೆ ನೀಡುತ್ತಿದೆ. 10 ವರ್ಷವಾದರೂ ವಾಡಿ-ಗದಗ ಲೈನ್ ಮರೀಚಿಕೆಯಾಗಿದೆ. ವರ್ಷದಲ್ಲಿ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರೂ ಯಾರಿಗೂ ಉದ್ಯೋಗ ಸಿಕ್ಕಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಜನರ ಕಲ್ಯಾಣಕ್ಕೆ ಶ್ರಮಿಸಿದ್ದೇವೆ. ಇದು ವಿರೋಧ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಕೇಂದ್ರ ಸರಕಾರದ ಅಸಹಕಾರದ ನಡುವೆ 2024-25ನೆ ಸಾಲಿಗೆ 52 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದೇವೆ ಎಂದರು.

ಐದು ಗ್ಯಾರಂಟಿ ಯೋಜನೆಗಳು ಐದು ಬೆರಳಿಗೆ ಸಮ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ಮೀಸಲಾತಿ ಸಿಕ್ಕಿತ್ತು. ಅವರ ಕೊಡುಗೆ, ಉಪಕಾರ ಸ್ಮರಣೆ ಮಾಡುವುದು ಇಲ್ಲಿನ ಜನರ ಕರ್ತವ್ಯ ಎಂದು ಅವರು ಹೇಳಿದರು.

ಶಾಸಕ ಎಂ.ವೈ.ಪಾಟೀಲ್ ಮತ್ತು ಡಾ.ಅಜಯ್ ಸಿಂಗ್ ಮನವಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ರಾಜ್ಯದೊಂದಿಗೆ ಸತತ ಸಂಪರ್ಕದಲ್ಲಿದ್ದು, ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವೆ ಎಂದರು.

50 ಸಾವಿರ ಹುದ್ದೆ ಭರ್ತಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ನಮ್ಮ ಸರಕಾರದ ಅವಧಿಯಲ್ಲಿಯೆ 371ಜೆ ಮೀಸಲಾತಿಯನ್ವಯ ಕಲ್ಯಾಣ ಕರ್ನಾಟಕ ಭಾಗದವರಿಂದಲೆ 50 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ಈಗಾಗಲೆ ವಿವಿಧ ಇಲಾಖೆಯಲ್ಲಿ 15 ಸಾವಿರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ 2-3 ವರ್ಷಗಳಲ್ಲಿ ಎಲ್ಲ ಹುದ್ದೆ ಭರ್ತಿ ಮಾಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರಕಾರ 5 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ, ಟ್ರಾಮಾ ಸೆಂಟರ್ ಆರಂಭಿಸಿದ್ದೇವೆ. ಸುಟ್ಟು ಗಾಯಗಳ ಘಟಕ, ಕ್ರಿಟಿಕಲ್ ಕೇರ್ ಯುನಿಟ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಶಾಖೆ ಸಹ ಮಂಜೂರು ಮಾಡಿದ್ದು, ಒಟ್ಟಾರೆಯಾಗಿ ಕಲಬುರಗಿಯನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News