ಹೆಚ್ಚುವರಿ 22 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ರಾಜ್ಯ ಸರಕಾರ

Update: 2023-10-13 14:18 GMT

(PTI File Photo)

ಬೆಂಗಳೂರು, ಅ.13: ಕಳೆದ ಒಂದು ವಾರದಿಂದ ನಡೆಸಲಾಗಿರುವ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಅನ್ವಯ ಹೆಚ್ಚುವರಿ 22 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ರಾಜ್ಯ ಸರಕಾರ ಶುಕ್ರವಾರ ಅಧೀಕೃತ ಅಧಿಸೂಚನೆ ಹೊರಡಿಸಿದೆ.

ಈ ಪೈಕಿ 11 ತಾಲೂಕುಗಳು ತೀವ್ರ ಬರಪೀಡಿತ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚುವರಿ ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಮುಂದಿನ ಸೋಮವಾರ ಮತ್ತೊಂದು ಮನವಿ ಪತ್ರ (ಮೆಮೊರಾಂಡಮ್) ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಈ ವರ್ಷ ಇತಿಹಾಸ ಕಾಣದ ತೀವ್ರ ಬರ ಎದುರಾಗಿದ್ದು, ಬಹುತೇಕ ಎಲ್ಲ ಜಿಲ್ಲೆಗಳಿಗೂ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಉಳಿದ ತಾಲೂಕುಗಳನ್ನೂ ‘ಬರ ಪೀಡಿತ’ ಎಂದು ಘೋಷಿಸುವಂತೆ ಒತ್ತಾಯ ಕೇಳಿಬಂದಿತ್ತು ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಅ.9ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಬರ ಘೋಷಣೆಯಿಂದ ಹೊರಗುಳಿದ 34 ತಾಲೂಕುಗಳ ಪೈಕಿ 22 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ವರದಿಯನುಸಾರ ಇದೀಗ 22 ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಈ ಪೈಕಿ 11 ತಾಲೂಕುಗಳಲ್ಲಿ ‘ತೀವ್ರ ಬರ’ ಹಾಗೂ 11 ತಾಲೂಕುಗಳಲ್ಲಿ ‘ಸಾಧಾರಣ ಬರ’ ಪೀಡಿತ ತಾಲೂಕು ಎಂದು ಘೋಷಿಸುವ ಅರ್ಹತೆ ಪಡೆದಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಸೆಪ್ಟೆಂಬರ್ ಅಂತ್ಯದವರೆಗಿನ ಬೆಳೆ ಸಮೀಕ್ಷೆಯನ್ನಷ್ಟೇ ಪರಿಗಣಿಸುವುದಾದರೆ 22 ತಾಲೂಕುಗಳ ಪೈಕಿ 17 ತಾಲೂಕುಗಳನ್ನು ‘ತೀವ್ರ ಬರಪೀಡಿತ ತಾಲೂಕು ಎಂದು ಮತ್ತು ಉಳಿದ 5 ತಾಲೂಕನ್ನು ಸಾಧಾರಣ ಬರಪೀಡಿತ’ ಎಂದು ಗುರುತಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು 236 ತಾಲೂಕುಗಳ ಪೈಕಿ 189 ತೀವ್ರ ಬರಪೀಡಿತ ಹಾಗೂ 27 ಸಾಧಾರಣಾ ಬರಪೀಡಿತ ತಾಲೂಕುಗಳು ಒಳಗೊಂಡಂತೆ ಒಟ್ಟು 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸೋಮವಾರ ಮತ್ತೊಂದು ಮೆಮೊರಾಂಡಮ್ ಸಲ್ಲಿಕೆ: ಮೊದಲ ಹಂತದಲ್ಲೆ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಕೇಂದ್ರ ಸರಕಾರದ ಪರಿಹಾರ ಕೋರಿ ಕಳೆದ ಸೆ.22 ರಂದು ಆನ್‍ಲೈನ್ ಮೂಲಕ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ.

ಬರ ಪರಿಸ್ಥಿತಿಯ ಅಧ್ಯಯನ ನಡೆಸಿರುವ ಕೇಂದ್ರದ ತಂಡವು ರಾಜ್ಯದ ಮನವಿ ಪತ್ರ ವಾಸ್ತವದಿಂದಲೇ ಕೂಡಿದೆ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೆ, ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನೂ ಬರ ಪೀಡಿತ ಪಟ್ಟಿಗೆ ಸೇರಿಸಿ ಮತ್ತೊಂದು ಮನವಿ ಪತ್ರ ಸಲ್ಲಿಸುವ ಹಕ್ಕು ರಾಜ್ಯಕ್ಕಿದೆ ಎಂದು ತಿಳಿಸಿತ್ತು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದರನ್ವಯ 22 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ನಡೆಸಲಾಗಿದ್ದು, ಮನವಿ ಪತ್ರ ಸಿದ್ದಪಡಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಅ.16ರಂದು ಮನವಿ ಪತ್ರ ಸಲ್ಲಿಸಲಾಗುವುದು, ಹೆಚ್ಚುವರಿ 300 ರಿಂದ 350 ಕೋಟಿ ರೂ.ಬರ ಪರಿಹಾರ ಕೋರಲು ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಸಣ್ಣ ರೈತರ ಬಗ್ಗೆ ಕೇಂದ್ರಕ್ಕೆ ನಿಖರ ಮಾಹಿತಿಯಿಲ್ಲ: ರಾಜ್ಯದ ಸಣ್ಣ-ಅತಿಸಣ್ಣ ರೈತರ ನಿಖರ ಅಂಕಿಸಂಖ್ಯೆ ಕೇಂದ್ರ ಸರಕಾರದ ಬಳಿ ಇಲ್ಲ, ಪರಿಣಾಮ ಬರ ಪರಿಹಾರ ನಿಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಶೇ.68 ರಿಂದ ಶೇ.70ರಷ್ಟು ಸಣ್ಣ, ಅತಿಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರಕಾರದ ಗಣತಿಯಂತೆ ಇದು ಶೇ.45ರಷ್ಟು ಮಾತ್ರ ಇದೆ. ಹೀಗಾಗಿ ಬರ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಮಳೆ ಕೊರತೆಯ ಕಾರಣಕ್ಕೆ ರಾಜ್ಯದಲ್ಲಿ 41.11 ಲಕ್ಷ ಹೆಕ್ಟೇರ್ ಭೂಮಿಯಲ್ಲಿನ ಕೃಷಿ ಕೈಕೊಟ್ಟಿದೆ. ಹೆಚ್ಚುವರಿಯಾಗಿ 10.5 ಲಕ್ಷ ಹೆಕ್ಟೇರ್ ಭೂಮಿಯ ಕೃಷಿಯೂ ಈ ಪಟ್ಟಿಗೆ ಸೇರಲಿದೆ. ಕೇಂದ್ರ ಸರಕಾರ ತನ್ನದೆ ಅಂಕಿಅಂಶಗಳ ಆಧಾರದಲ್ಲಿ ಪರಿಹಾರ ಬಿಡುಗಡೆ ಮಾಡಿದರೆ ರಾಜ್ಯಕ್ಕೆ ಮತ್ತಷ್ಟು ಅನ್ಯಾಯವಾಗಲಿದೆ ಎಂದು ಅವರು ತಿಳಿಸಿದರು.

ತೀವ್ರ ಬರಪೀಡಿತ ತಾಲೂಕುಗಳು: ಬೆಳಗಾವಿ, ಖಾನಾಪುರ, ಚಾಮರಾಜನಗರ, ಅಳ್ನಾವರ, ಅಣ್ಣೀಗೇರಿ, ಕಲಘಟಗಿ, ಮುಂಡರಗಿ, ಆಲೂರು, ಅರಸೀಕೆರೆ, ಹಾಸನ, ಬ್ಯಾಡಗಿ, ಹಾನಗಲ್, ಶಿಗ್ಗಾಂವ್, ಪೊನ್ನಂಪೇಟೆ ಕೆ.ಆರ್.ನಗರ, ಹೆಬ್ರಿ, ದಾಂಡೇಲಿ.

ಸಾಧಾರಣಾ ಬರಪೀಡಿತ ತಾಲೂಕುಗಳು: ಯಳಂದೂರು, ಮೂಡಿಗೆರೆ, ತರೀಕೆರೆ, ಸಿದ್ದಾಪುರ, ತರೀಕೆರೆ ಹಾಗೂ ಸಿದ್ದಾಪುರ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News