ಡೆಂಗ್ಯೂವನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ರಾಜ್ಯ ಸರಕಾರ
ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿದ್ದು, ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ಕಾಯಿಲೆʼ ಎಂದು ಘೋಷಣೆ ಮಾಡಿದೆ.
ಅಲ್ಲದೆ, ಇನ್ನು ಮುಂದೆ ಸ್ವಚ್ಚತೆ ಕಾಪಾಡದವರಿಗೆ ದಂಡ ಬೀಳಲಿದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡಿ ಆ.31ರ ಕರ್ನಾಟಕ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ಸಾಂಕ್ರಾಮಿಕ ರೋಗವನ್ನಾಗಿ ಘೋಷಿಸುವುದರ ಜೊತೆಗೆ ಡೆಂಗ್ಯೂ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ಹಾಕಲಾಗುವುದು ಎಂದರು.
ಇದರಿಂದ ಆರೋಗ್ಯ ಇಲಾಖೆಗೆ ಡೆಂಗ್ಯೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕಾನೂನಿನ ಅಸ್ತ್ರ ಬಳಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮಂಗಳೂರು ಬಿಟ್ಟರೆ ರಾಜ್ಯದ ಬೇರೆ ಪ್ರದೇಶಗಳಲ್ಲಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಡೆಂಗ್ಯೂ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ, ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂ. ಹಾಗೂ ನಗರ ಪ್ರದೇಶಗಳಲ್ಲಿ 400 ರೂ. ದಂಡ ವಿಧಿಸಲಾಗುವುದು. ಅಲ್ಲದೇ ಶಾಲಾ ಕಾಲೇಜು, ಹೊಟೇಲ್, ಲಾಡ್ಜ್, ರೆಸಾರ್ಟ್ ಗಳು ಸೇರಿದಂತೆ ವಾಣಿಜ್ಯ ಸಂಘ, ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 500 ಹಾಗೂ ನಗರ ಪ್ರದೇಶಗಳಲ್ಲಿ 1000 ರೂ. ದಂಡ ನಿಗದಿಪಡಿಸಲಾಗಿದ್ದು, ಕಟ್ಟಡ ನಿರ್ಮಾಣ, ಹೊರಾಂಗಣ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ 1000 ರೂ. ಹಾಗೂ ನಗರ ಪ್ರದೇಶಗಳಲ್ಲಿ 2000 ರೂ. ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದರು.
ಈಡಿಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲವಾಗುವಂತೆ ನೀರು ಸಂಗ್ರಹಣೆಯಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವುದು ಮುಖ್ಯ. ದಂಡ ವಿಧಿಸುವುದಕ್ಕಿಂತ ಜನರು ಡೆಂಗ್ಯೂ ವಿಚಾರದಲ್ಲಿ ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಈ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸುಧಾಕರ್ ತಾವೇ ಆರೋಪ ಮಾಡಿಕೊಳ್ಳುತ್ತಿದ್ದಾರೆ: ಕೋವಿಡ್ ಅಕ್ರಮ ಕುರಿತಂತೆ ನಿವೃತ್ತ ನ್ಯಾ.ಕುನ್ಹಾ ಅವರು ವರದಿಯನ್ನು ಮುಖ್ಯಮಂತ್ರಿಗೆ ನೀಡಿದ್ದು, ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ಆಗಲಿದೆ. ವರದಿಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಸಂಸದ ಡಾ.ಕೆ.ಸುಧಾಕರ್ ಮಾತ್ರ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಬಹುಷಃ ಕೋವಿಡ್ ಸಂದರ್ಭದಲ್ಲಿ ಅವರು ಮಾಡಿರುವ ತಪ್ಪುಗಳ ಪಶ್ಚಾತ್ತಾಪ ಸುಧಾಕರ್ ಗೆ ಕಾಡುತ್ತಿರಬಹುದು. ತಜ್ಞರ ಸಮಿತಿ ಕೊವಿಡ್ ಅಕ್ರಮದ ಬಗ್ಗೆ ವರದಿ ಸಲ್ಲಿಕೆ ಮಾಡಿದೆ. ವರದಿಯಲ್ಲಿ ಇಂಥವರ ಹೆಸರು ಇದೆ ಎಂದು ನಾವು ಹೇಳಿಲ್ಲ. ಸುಧಾಕರ್ ಅವರೇ ತಮ್ಮ ಬಗ್ಗೆ ತಾವು ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.