ರಾಜ್ಯ ಸರಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದೆ: ಆರ್.ಅಶೋಕ್ ಟೀಕೆ
ಬೆಂಗಳೂರು: ರಾಜ್ಯ ಸರಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದ್ದು, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುತ್ತಿದೆ. ಸಚಿವರು ಸಹ ದಾರಿ ಕಾಣದಂತಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬುಧವಾರ ವಿಧಾನಸಭೆಯ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಡಿ ಮಾತನಾಡಿದ ಅವರು, ತುಳಿತಕ್ಕೊಳಗಾದ ದಲಿತರಿಗೆ ಮೀಸಲಿಟ್ಟ 11,400 ಕೋಟಿ ರೂ. ಬೇರೆ ಕಡೆಗೆ ಬಳಸಿದ್ದಾರೆ. ಹಿಂದುಳಿದವರ ಚಾಂಪಿಯನ್ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಂತಹ ಘನ ಕಾರ್ಯಕ್ಕೆ ಆ ಹಣ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯನ್ನು ರೂಪಿಸಿದ್ದು, ಅದನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿದೆ. ಭಾಗ್ಯಲಕ್ಷ್ಮೀ, ಕಿಸಾನ್ ಸಮ್ಮಾನ್, ಸ್ವಾಮಿ ವಿವೇಕಾನಂದ ಯುವಶಕ್ತಿ, ಭೂಸಿರಿ, ಶ್ರಮಶಕ್ತಿ, ಬಸ್ ಪಾಸ್ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ರದ್ದುಪಡಿಸಿದೆ. ಕಾರ್ಮಿಕ ಇಲಾಖೆಯಿಂದ 1-5 ತರಗತಿಯ ಮಕ್ಕಳಿಗೆ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತಿದ್ದು, ಅದನ್ನು 1,100 ರೂ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದರು.
6-7 ತರಗತಿಯ ಮಕ್ಕಳಿಗೆ 5 ಸಾವಿರ ರೂ. ನೀಡುತ್ತಿದ್ದರೆ 1,250 ರೂ.ಗೆ ಇಳಿಸಲಾಗಿದೆ. 8-9 ತರಗತಿಯ ಮಕ್ಕಳಿಗೆ 12 ಸಾವಿರ ರೂ. ನೀಡುತ್ತಿದ್ದರೆ ಈಗ 3 ಸಾವಿರ ರೂ. ನೀಡಲಾಗುತ್ತಿದೆ. ಎಂಬಿಬಿಎಸ್‍ಗೆ 25 ಸಾವಿರ ರೂ. ನೀಡುತ್ತಿದ್ದರೆ ಈಗ 11 ಸಾವಿರ ರೂ.ಗೆ ಇಳಿಸಲಾಗಿದೆ. ಎಂಟೆಕ್‍ಗೆ 60 ಸಾವಿರ ರೂ. ನೀಡುತ್ತಿದ್ದರೆ ಅದನ್ನು 11 ಸಾವಿರ ರೂ.ಗೆ ತಂದಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರ ಅಭಿವೃದ್ಧಿಗೆ 5,000 ಕೋಟಿ ರೂ. ದೊರೆತಿದೆ. 2009-14ರ ಅವಧಿಯಲ್ಲಿ ರೈಲ್ವೆ ಯೋಜನೆಗೆ 835 ಕೋಟಿ ರೂ. ಸಿಕ್ಕರೆ, ಮೋದಿ ಅವಧಿಯಲ್ಲಿ 3,424 ಕೋಟಿ ರೂ. ದೊರೆತಿದೆ. ಕರಾವಳಿ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ 1,441 ಕೋಟಿ ರೂ. ದೊರೆತಿದೆ. ಆದ್ದರಿಂದ ಕಾಂಗ್ರೆಸ್ ಹೇಳುವಂತೆ ಕೇಂದ್ರ ಸರ್ಕಾರದಿಂದ ಅನ್ಯಾಯ ಎನ್ನುವುದು ತಪ್ಪು. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ 3-4 ಪಟ್ಟು ಅಧಿಕ ಅನುದಾನ ದೊರೆತಿದೆ ಎಂದು ಅವರು ಹೇಳಿದರು.