ಅಡಿಕೆಬೆಳೆಗೆ ಎಲೆಚುಕ್ಕೆ ರೋಗ ತಡೆಗೆ ಸಂಶೋಧನೆ ಹಣದ ಕೊರತೆ ಇಲ್ಲ: ಸಚಿವ ಚಲುವರಾಯಸ್ವಾಮಿ
ಬೆಳಗಾವಿ: ‘ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗ ನಿಯಂತ್ರಣಕ್ಕೆ ಸರಕಾರ ಕ್ರಮ ವಹಿಸಿದ್ದು, ರೋಗ ತಡೆಗಟ್ಟಲು ಸಂಶೋಧನೆ ನಡೆಸಲು ಯಾವುದೇ ಹಣಕಾಸಿನ ಕೊರತೆ ಇಲ್ಲʼ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ ವಿಷಯಕ್ಕೆ ತೋಟಗಾರಿಕೆ ಸಚಿವರ ಪರವಾಗಿ ಉತ್ತರ ನೀಡಿದ ಅವರು, ‘ಅಡಿಕೆ ಬೆಳೆಗೆ ತಗುಲಿರುವ ರೋಗಗಳನ್ನು ತಡೆಗಟ್ಟಲು ಸರಕಾರ ಗಮನಹರಿಸಿದೆ. ಆದಷ್ಟು ಬೇಗ ರೋಗ ತಡೆಗಟ್ಟಲು ಸಂಶೋಧನೆ ನಡೆಸಿ ಔಷಧಿಗಳನ್ನ ಕಂಡು ಹಿಡಿಯಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಡಿಕೆಗೆ ತಗುಲಿರುವ ಎಲೆಚುಕ್ಕೆ ಮತ್ತು ಹಳದಿ ರೋಗದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ರೈತರಿಗೆ ಸರಕಾರ ಸಹಾಯಧನವನ್ನು ಒದಗಿಸಲಾಗುತ್ತಿದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ನಾನೂ ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ, ‘ಕರ್ನಾಟಕ ರಾಜ್ಯದಲ್ಲಿ ಶೇ.65ರಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಮತ್ತು ಎಲೆಚುಕ್ಕೆ ರೋಗದಿಂದ ಅಡಿಕೆ ಬೆಳೆ ಇಳುವರಿ ಕುಸಿದಿದೆ. ಎಲೆಚುಕ್ಕೆ ರೋಗ ಗಾಳಿಯಲ್ಲಿ ಹರಡುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿ ಬಂದಿದೆ ಎಂದು ಗಮನ ಸೆಳೆದರು.
‘ಅಡಿಕೆ ಬೆಳೆಗೆ ತಗುಲಿರುವ ಎಲೆ ಚುಕ್ಕೆ ರೋಗಕ್ಕೆ ಔಷಧಿ ಇದೆ, ರೈತರು ಒಬ್ಬರು, ಇಬ್ಬರು ಮಾತ್ರ ರೋಗಕ್ಕೆ ಔಷಧಿ ಸಿಂಪಡಿಸಿದರೆ ಅದು ಹೋಗುವುದಿಲ್ಲ. ಹೀಗಾಗಿ ಸರಕಾರವೇ ಸಿಂಪಡಿಸಬಹುದು ಎಂದು ಆಗ್ರಹಿಸಿದ ಅವರು, ಅಡಿಕೆ ಬೆಳೆಯುವ ರೈತರ ಸಂಕಷ್ಟಕ್ಕೆ ಸರಕಾರ ಕೂಡಲೇ ಧಾವಿಸಿ ಔಷಧಿ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ತಿಂಗಳ ಅಂತ್ಯದೊಳಗೆ ಬೆಳೆ ವಿಮೆ ಪಾವತಿ
ರೈತರ ಹಿತರಕ್ಷಣೆ ರಾಜ್ಯ ಸರಕಾರದ ಆದ್ಯತೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ, ಬೆಳೆ ವಿಮೆ ಹಣ ರೈತರಿಗೆ ಪಾವತಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ವರ್ಷ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದೆ. ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಿಡ್ ಸೀಜನ್ ಅಡ್ವರ್ಸಿಟಿಯಡಿ ಅಂದಾಜಿಸಲಾದ ಪರಿಹಾರ ಸುಮಾರು 450 ಕೋಟಿ ರೂಪಾಯಿ ಭರಿಸಲಾಗಿದೆ.
ಈಗಾಗಲೇ ಬೆಳೆ ಕಟಾವು ಸಮೀಕ್ಷೆ ಸಂಪೂರ್ಣ ಮುಗಿದಿದ್ದು ಉಳಿದ ರೈತರಿಗೂ ವಿಮೆ ಹಣ ಶೀಘ್ರ ತಲುಪಲಿದೆ. ಬೆಳೆ ಕಟಾವು ಸಮೀಕ್ಷೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಹಿಂದಿನ ಏಳು ಸಾಲುಗಳಲ್ಲಿ ಐದು ವರ್ಷಗಳ ಸರಾಸರಿ ಇಳುವರಿಯನ್ನು ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ. ಇದನ್ನು ಬದಲಾಯಿಸುವಂತೆ ರಾಜ್ಯ ಸರಕಾರದಿಂದ ಪತ್ರದ ಮೂಲಕ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಈ ಮಾರ್ಗಸೂಚಿಯನ್ನು ಬದಲಾಯಿಸಲು ಕೇಂದ್ರ ಸರಕಾರ ಸಮ್ಮತಿಸಿಲ್ಲ ಎಂದು ಮಾಹಿತಿ ನೀಡಿದರು.
ಕೃಷಿಭಾಗ್ಯ ಚಾಲನೆ: ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ಮಾರ್ಗಸೂಚಿ ಹೊರಡಿಸಲಾಗಿದೆ ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದು ಅವರು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರ ನೀಡಿದರು.