ಕಾರವಾರದಲ್ಲಿ ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್ ಹಾಕಿಸಲು ಹಣವಿಲ್ಲ, ಹಾವೇರಿಯಲ್ಲಿ ಬಿಸಿಯೂಟಕ್ಕೆ ಅಕ್ಕಿ ಇಲ್ಲ: ಸಿ.ಟಿ.ರವಿ ಆರೋಪ

Update: 2023-08-22 13:33 GMT

ಮಂಡ್ಯ, ಆ.22: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ ರಾಜ್ಯ ಅದ್ವಾನವಾಗಿ ಬಿಟ್ಟಿದ್ದು, ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯಲು ಶ್ವೇತಪತ್ರದ ಅವಶ್ಯಕತೇನೆ ಬೇಕಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್ ಹಾಕಿಸಲು ಹಣವಿಲ್ಲ, ಹಾವೇರಿಯಲ್ಲಿ ಬಿಸಿಯೂಟ ಅಕ್ಕಿ ಇಲ್ಲ, ಅಂಗನವಾಡಿಗೆ ಕೊಳಕು ಮೊಟ್ಟೆ, ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಸಂಬಳವೇ ಇಲ್ಲ ಎಂದು ಅವರು ಆರೋಪಿಸಿದರು.

‘ಗ್ಯಾರಂಟಿ’ ಆಸೆ ತೋರಿಸಿ ಪರಿಸ್ಥಿತಿ ಲಾಭ ಪಡೆದು ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದೆ. ಉಚಿತವಾಗಿ ವಿದ್ಯುತ್ ಕೊಡುವುದಾಗಿ ಹೇಳುತ್ತಾರೆ. ಆದರೆ, ಅನಿಯಮಿತ ವಿದ್ಯುತ್ ಕಡಿತವಾಗುತ್ತಿದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ರಾಜ್ಯ ಕತ್ತೆಲೆಯಲ್ಲಿ ಮಲಗಿದೆ ಎಂದು ಅವರು ಆಪಾದಿಸಿದರು.

ತಮಿಳುನಾಡಿಗೆ ನೀರು ಹರಿಯಬಿಟ್ಟು ಮಾಡಿದ ಪಾಪಕ್ಕೆ ಎಲ್ಲರ ಕೈಯಲ್ಲೂ ಅಧಿಕೃತ ಮುದ್ರೆ ಒತ್ತಿಸಿಕೊಳ್ಳಲು ಸರ್ವಪಕ್ಷ ಸಭೆ ಕರೆದಿದ್ದಾರೆ. ಮುಂಚೆಯೇ ಪರಿಸ್ಥಿತಿ ಅವಲೋಕಿಸಿ ಅಥವಾ ಯಾರನ್ನಾದರೂ ಕೇಳಿ ನೀರು ಬಿಟ್ರಾ? ಸರ್ವಪಕ್ಷ ಯಾವ ಉದ್ದೇಶಕ್ಕೆ ಕರೆದಿದ್ದೀರಿ? ಎಂದು ಅವರು ವಾಗ್ದಾಳಿ ನಡೆಸಿದರು.

‘ಇಂಡಿಯಾ’ ಒಕ್ಕೂಟದಲ್ಲಿರುವ ಸ್ಟಾಲಿನ್ ಅವರನ್ನು ಸಂತೃಪ್ತಿಗೊಳಿಸಲು ಅವರು ಕೇಳುವುದಕ್ಕೆ ಮುಂಚೆಯೇ ತಮಿಳನಾಡಿಗೆ ನೀರು ಬಿಡಲಾಗಿದೆ. ರಾಜ್ಯದ ರೈತರ ಬದುಕಿಗೆ ಕೊಳ್ಳಿ ಹಿಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹಾಗು ಇತರೆ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ಅವರ ಕಾಲ್ಗುಣವೋ ಎನೋ, ಕಾಂಗ್ರೆಸ್‍ನವರು ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರಗಾಲವೇ. ಇದು ನಮ್ಮ ದುರ್ದೈವ. ಅವರು ಬಂದಾಗ ಡ್ಯಾಂ ಭರ್ತಿ ಆಗಿದೆ ಅನ್ನುವುದು ಕಡಿಮೆ. ದೇವರು ದಿಂಡ್ರು ಮೇಲೆ ನಂಬಿಕೆ ಇದ್ರೆ ದೇವರಾದ್ರೂ ಕೃಪೆ ತೋರ್ತಾನೆ. ಆದರೆ, ಮುಂಚೇನೆ ಇವ್ಕೆ ದೇವ್ರು ದಿಂಡ್ರು ಅಂದ್ರೆ ಆಗಲ್ಲ. ದೇವರು ಎಲ್ಲಿ ಕೃಪೆ ತೋರ್ತಾನೆ? ಜನ ಮೆಚ್ಚಿಸಲು ಎಲೆಕ್ಷನ್ ಟೈಂನಲ್ಲಿ ಕೈಮುಗೀತಾರೆ ಅಷ್ಟೆ.”

-ಸಿ.ಟಿ.ರವಿ. ಮಾಜಿ ಶಾಸಕ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News