ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ; ಆಸ್ಪತ್ರೆಗೆ ದಾಖಲು
Update: 2023-08-06 15:14 GMT
ಬೆಂಗಳೂರು, ಆ.6: ವೃಕ್ಷಮಾತೆ ಎಂದು ಕರೆಯಲ್ಪಡುವ ಸಾಲುಮರದ ತಿಮ್ಮಕ್ಕ ಬಿದ್ದು ಗಾಯಗೊಂಡು ಅಸ್ವಸ್ಥರಾಗಿದ್ದು, ಅವರನ್ನು ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಸಾಲುಮರದ ತಿಮ್ಮಕ್ಕ ರವಿವಾರ ಸಂಜೆ 4.30ರ ಸುಮಾರಿಗೆ ಮಂಜುನಾಥನಗರದಲ್ಲಿರುವ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಗಾಯಗೊಂಡಿದ್ದರು. ಹೀಗಾಗಿ ವಿಪರೀತ ನೋವಿನಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ವೈದ್ಯರು ತಕ್ಷಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಸಾಲುಮರದ ತಿಮ್ಮಕ್ಕ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಬೆನ್ನಿನ ಭಾಗಕ್ಕೆ ಸ್ವಲ್ಪ ಪೆಟ್ಟಾಗಿದೆ, ಉಳಿದಂತೆ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಕೌಟುಂಬಿಕ ಮೂಲದಿಂದ ತಿಳಿದುಬಂದಿದೆ.