ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೇ ಗ್ಯಾರಂಟಿ ಹೆಸರಲ್ಲಿ ಪ್ರಚಾರ ಮಾಡುತ್ತಿದ್ದಾರೆ: ಸಂಸದ ಡಿ.ಕೆ. ಸುರೇಶ್

Update: 2024-01-11 10:09 GMT

ಬೆಂಗಳೂರು: ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೇ ಇಂದು ಗ್ಯಾರಂಟಿ ಹೆಸರಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಗುರುವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಸರ್ಕಾರ ಬಂದ ನಂತರ ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡಲಾಗಿದೆ" ಎಂದರು.

ಈ ಯೋಜನೆಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆಗಳನ್ನು ಜಾರಿ ತರಲಾಗಿದೆ.

ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 58 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅಪಾರ್ಟ್‌ ಮೆಂಟ್ ನಿವಾಸಿಗಳು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದಾರೆ. ಅಂದರೆ ಅಪಾರ್ಟ್‌ ಮೆಂಟ್ ನಿವಾಸಿಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊಸ ಕಾಯಕಲ್ಪ ನೀಡಲು, ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಸ್ಥಳದಲ್ಲೇ ಜನರ ಸಮಸ್ಯೆಗೆ ಪರಿಹಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಸಮಸ್ಯೆಗಳ ಸಾಗರವನ್ನು ಇಟ್ಟುಕೊಂಡಿದೆ. ಟ್ರಾಫಿಕ್, ರಸ್ತೆ ಗುಂಡಿ, 110 ಹಳ್ಳಿಗಳ ಮೂಲಸೌಕರ್ಯ, ಕೆರೆಗಳ ಪುನಶ್ಚೇತನ ಸೇರಿದಂತೆ ಅನೇಕ ಸಮಸ್ಯೆ ಇದೆ. ಈ ಅಹವಾಲು ಸ್ವೀಕಾರ ನಂತರ ಉಪಮುಖ್ಯಮಂತ್ರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕ ಪರಿಹಾರ ನೀಡಬೇಕು. ಆಗ ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರ ಯಶಸ್ಸು ಕಾಣಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News