ವೀಸಾ ಇಲ್ಲದೇ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಮೂಲದ ಮೂವರು ಕೊಲೆ ಆರೋಪಿಗಳು ಬೆಂಗಳೂರಿನಲ್ಲಿ ಸೆರೆ

Update: 2023-08-24 14:43 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.24: ವೀಸಾ ಇಲ್ಲದೇ ಅಕ್ರಮವಾಗಿ ಬೋಟ್ ಮುಖಾಂತರ ಶ್ರೀಲಂಕಾದಿಂದ ಭಾರತಕ್ಕೆ ನುಸುಳಿ, ಬಳಿಕ ಬೆಂಗಳೂರು ನಗರಕ್ಕೆ ಬಂದಿದ್ದ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ರೌಡಿಶೀಟರ್ ಜೈ ಪರಮೇಶ್ ಹಾಗೂ ಶ್ರೀಲಂಕಾ ಪ್ರಜೆಗಳಾದ ಕಸನ್ ಕುಮಾರ ಸನಕ, ಅಮಿಲಾ ನೂವಾನ್ ಮತ್ತು ರಂಗಪ್ರಸಾದ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳಿಗೆ  ರೌಡಿಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ. ವೀಸಾ ಪಾಸ್‍ ಪೋರ್ಟ್ ಇಲ್ಲದೇ ಬೋಟ್ ಮೂಲಕ ಭಾರತದ ಗಡಿ ಪ್ರವೇಶಿಸಿರುವ ಶ್ರೀಲಂಕಾ ಆರೋಪಿಗಳು ಸೇಲಂನಿಂದ ಬೆಂಗಳೂರು ತಲುಪಿದ್ದರು. ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ.

20 ದಿನಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಪ್ರಜೆಗಳು, ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀಲಂಕಾದಲ್ಲಿ ಈ ಮೂವರ ಮೇಲೆ ಸರಣಿ ಕೊಲೆ ಪ್ರಕರಣ ಇದ್ದು, ಸಿಸಿಬಿ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಅಪರಾಧ ಹಿನ್ನೆಲೆ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕಸನ್ ಕುಮಾರ ಮೇಲೆ ನಾಲ್ಕು ಕೊಲೆ ಪ್ರಕರಣ, ಅಮಿಲಾ ನೂವಾನ್ ಮೇಲೆ ಐದು ಕೊಲೆ ಪ್ರಕರಣ ಹಾಗೂ ರಂಗಪ್ರಸಾದ್ ಮೇಲೆ ಎರಡು ಕೊಲೆ ಮತ್ತು ಎರಡು ಹಲ್ಲೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿಳಾಸದ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ಹಲವು ಮಂದಿಯ ಆಧಾರ್, ವೋಟರ್ ಐಡಿಯ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದೆ. ಆರೋಪಿಗಳು ಬೆಂಗಳೂರಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗಲು ಸಂಚು ರೂಪಿಸಿದ್ದರಾ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.

ಶ್ರೀಲಂಕಾದ ಆರೋಪಿಗಳು ಸಿಂಹಳ ಭಾಷೆ ಮಾತನಾಡುತ್ತಿದ್ದು, ಹಿಂದಿ ಇಂಗ್ಲಿಷ್ ಬಾರದಿರುವುದು ವಿಚಾರಣೆಗೆ ತೊಡಕಾಗಿದೆ. ರೌಡಿಶೀಟರ್ ಜೈ ಪರಮೇಶ್‍ಗೂ ಸಿಂಹಳ ಭಾಷೆ ಬರುವುದಿಲ್ಲ. ಆದರೆ, ಮೂರನೇ ವ್ಯಕ್ತಿಯ ಅಣತಿ ಮೇರೆಗೆ ಈ ಮೂವರನ್ನೂ ಸೇಲಂನಿಂದ ಕರೆತಂದಿದ್ದ ಜೈ ಪರಮೇಶ್, ಬೆಂಗಳೂರಿನಲ್ಲಿ ಆಶ್ರಯ ನೀಡಿದ್ದ ಎಂದು ತಿಳಿದು ಬಂದಿದೆ.

ಮೂರನೇ ವ್ಯಕ್ತಿಯು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ಆತನ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News