ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ಪ್ರಕರಣ: ಮೂರು ಪ್ರತ್ಯೇಕ ಪ್ರಕರಣ, ಪ್ರತ್ಯೇಕ ತನಿಖಾ ತಂಡ ರಚನೆ

Update: 2024-08-27 14:59 GMT

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‍ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2 ಪ್ರಕರಣಗಳಲ್ಲಿ ನಟ ದರ್ಶನ್ ಎ-1 ಆರೋಪಿಯಾಗಿದ್ದಾರೆ. ಈ ಮೂರೂ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಿರುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

ಬೇಗೂರು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಕೃಷ್ಣಕುಮಾರ್, ಹುಳಿಮಾವು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ್ ಅವರುಗಳಿಗೆ ಕ್ರಮವಾಗಿ ಮೂರು ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.

ಮೊದಲನೇ ಪ್ರಕರಣದ ತನಿಖೆಯನ್ನು ಬೇಗೂರು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡಕ್ಕೆ ವಹಿಸಲಾಗಿದ್ದು, ದರ್ಶನ್ ಅವರು ಜೈಲಿನ ಆವರಣದೊಳಗೆ ರೌಡಿಶೀಟರ್ಸ್ ಜೊತೆ ಕುಳಿತು ಕಾಫಿ ಕುಡಿಯುತ್ತ ಸಿಗರೇಟ್ ಸೇದುತ್ತಿರುವುದರ ಕುರಿತು ತನಿಖೆ ನಡೆಯಲಿದೆ.

ಎರಡನೇ ಪ್ರಕರಣದ ತನಿಖೆಯನ್ನು ನಡೆಸಲು ಹುಳಿಮಾವು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡಕ್ಕೆ ವಹಿಸಲಾಗಿದ್ದು, ಮೊಬೈಲ್‍ನಲ್ಲಿ ಫೋಟೋ ಹಾಗೂ ವಿಡಿಯೋ ಕಾಲ್ ಚಿತ್ರೀಕರಣದ ಬಗ್ಗೆ ತನಿಖೆ ನಡೆಯಲಿದೆ.

ಮೂರನೇ ಪ್ರಕರಣದ ತನಿಖೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ್ ನೇತೃತ್ವದ ತಂಡ ನಡೆಸಲಿದ್ದು, ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ತನಿಖೆ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೈಲಿನ ನಿಯಮ ಉಲ್ಲಂಘಿಸಿ ಆರೋಪಿಗಳಿಗೆ ವಿಶೇಷ ಆತಿಥ್ಯ ನೀಡಿರುವುದರ ಕುರಿತು ಪ್ರಕರಣ ದಾಖಲಿಸಿ, ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದರ ವರದಿ ಬಂದ ಬಳಿಕ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

ದರ್ಶನ್ ಸೇರಿ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿರುವುದರ ಕುರಿತು ನ್ಯಾಯಾಲಯದ ಅನುಮತಿ ಪಡೆದುಕೊಂಡು ತನಿಖೆ ಆರಂಭಿಸಲಾಗುವುದು. ಅನುಮತಿ ಸಿಕ್ಕರೆ ತನಿಖೆಯ ಭಾಗವಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲಾಗುತ್ತದೆ.

-ಬಿ.ದಯಾನಂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News