ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆತ: ಅಸಭ್ಯ ವರ್ತನೆ ತೋರಿದ 10 ಬಿಜೆಪಿ ಶಾಸಕರು ವಿಧಾನಸಭೆಯಿಂದ ಅಮಾನತು

Update: 2023-07-19 12:04 GMT

ಬೆಂಗಳೂರು, ಜು.19: ವಿಧಾನಸಭೆಯಲ್ಲಿ ಅತಿರೇಕದ ವರ್ತನೆ ತೋರಿ, ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮುಖದ ಮೇಲೆ ವಿಧೇಯಕಗಳ ಪ್ರತಿಗಳನ್ನು ಹರಿದು ಬಿಸಾಡಿದ ಘಟನೆಗೆ ಸಂಬಂಧಿಸಿದಂತೆ 10 ಮಂದಿ ಬಿಜೆಪಿ ಸದಸ್ಯರನ್ನು ಪ್ರಸಕ್ತ ಅಧಿವೇಶನ ಮುಗಿಯುವವರೆಗೆ ಸದನದಿಂದ ಅಮಾನತುಗೊಳಿಸಿ ಬುಧವಾರ ಸ್ಪೀಕರ್ ಯು.ಟಿ.ಖಾದರ್ ಆದೇಶಿಸಿದ್ದಾರೆ.

ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿ.ಸುನೀಲ್ ಕುಮಾರ್, ಆರ್.ಅಶೋಕ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ್ ಕೋಟ್ಯಾನ್, ಅರವಿಂದ ಬೆಲ್ಲದ್, ಆರಗ ಜ್ಞಾನೇಂದ್ರ, ವೈ.ಭರತ್ ಶೆಟ್ಟಿಯನ್ನು ಸದನದಲ್ಲಿ ಅಸಭ್ಯ ಹಾಗೂ ಅಗೌರವದಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಅಮಾನತ್ತುಗೊಳಿಸಿದರು.

ಈ ಸದನದ ಗೌರವ, ಪೀಠದ ಗೌರವ ಉಳಿಸುವುದು ನನ್ನ ಜವಾಬ್ದಾರಿ. ಆದರೆ, ನೀವು(ಬಿಜೆಪಿ ಸದಸ್ಯರು) ಈ ಸದನ ಹಾಗೂ ಪೀಠಕ್ಕೆ ನಿಮ್ಮ ಪ್ರತಿಭಟನೆ, ಅಶಿಸ್ತಿನ ಮೂಲಕ ಅಗೌರವ ತೋರಿಸಿದ್ದೀರಾ. ನಮ್ಮ ರಾಜ್ಯ, ದೇಶದ ಜನ ಇದನ್ನು ನೋಡಿದ್ದಾರೆ. ಈ ಸದನ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆಗೆ ತಾವು ಕಪ್ಪು ಚುಕ್ಕೆ ತರುತ್ತಿದ್ದೀರಾ. ನಿಮಗೆ ಮತ ಕೊಟ್ಟಿರುವ ಜನತೆಗೆ ದೊಡ್ಡಮಟ್ಟದ ದ್ರೋಹ ಹಾಗೂ ಮೋಸ ಮಾಡುತ್ತಿದ್ದೀರಾ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಆಶಿಸ್ತು ಹಾಗೂ ಪೀಠಕ್ಕೆ ತೋರಿದ ಅಗೌರವ, ಒಂದು ಸಣ್ಣ ವಿಚಾರವನ್ನು ನಿಮ್ಮ ರಾಜಕೀಯಕ್ಕೆ ಬಳಸಿಕೊಂಡು, ಇಡೀ ಸದನದ ಕಲಾಪ ವ್ಯರ್ಥ ಮಾಡಿಕೊಂಡು, ಸಮಯ ಹಾಳು ಮಾಡಿದ್ದೀರಾ. ನೀವು ಉತ್ತಮವಾಗಿ ಕೆಲಸ ಮಾಡಿದಾಗ ನಿಮಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಆದರೆ, ಅಶಿಸ್ತು ತೋರಿದಾಗ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದರು.

ಪ್ರಜಾಪ್ರಭುತ್ವದ ಈ ಸಂಸದೀಯ ವ್ಯವಸ್ಥೆಯಲ್ಲಿ ಸದನ ಅತ್ಯಂತ ಗೌರವ ಹಾಗೂ ಪವಿತ್ರವಾದದ್ದು. ಸಭಾಧ್ಯಕ್ಷರ ಪೀಠವು ಅತ್ಯಂತ ಗೌರವಯುತವಾದದ್ದು. ಈ ಪೀಠದ ಗೌರವ ಉಳಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ವ್ಯವಸ್ಥೆಗೆ ಧಕ್ಕೆ ಬರುವಂತಹ, ಸದನದಲ್ಲಿ ಅಗೌರವ, ಅಶಿಸ್ತು, ಬೇಜವಾಬ್ದಾರಿಯಿಂದ ನಡೆದುಕೊಂಡು, ನಮ್ಮ ರಾಜ್ಯಕ್ಕೆ ಹಾಗೂ ಜನತೆಗೆ ಕಪ್ಪು ಚುಕ್ಕೆ ಬರುವಂತಹ ಕೆಲಸ ಮಾಡಿದರೆ, ಈ ಪೀಠ ಅದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಆದುದರಿಂದ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿ.ಸುನೀಲ್ ಕುಮಾರ್, ಆರ್.ಅಶೋಕ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ್ ಕೋಟ್ಯಾನ್, ಅರವಿಂದ ಬೆಲ್ಲದ್, ಆರಗ ಜ್ಞಾನೇಂದ್ರ, ವೈ.ಭರತ್ ಶೆಟ್ಟಿ ಇವರನ್ನು ಸದನದಲ್ಲಿ ಅಸಭ್ಯ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ನಾನು ಅವರನ್ನು ‘ಹೆಸರಿಸಿದ್ದೇನೆ’ ಎಂದು ಖಾದರ್ ಹೇಳಿದರು.

ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸದನದಲ್ಲಿ ಅಸಭ್ಯವಾಗಿ ಹಾಗೂ ಅಗೌರವದಿಂದ ನಡೆದುಕೊಂಡ ಸದಸ್ಯರನ್ನು ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿ 348ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನ ಮುಗಿಯುವವರೆಗೆ ಅಮಾನತ್ತುಗೊಳಿಸಿ ಸದನಕ್ಕೆ ಬಾರದಂತೆ ತಡೆ ಹಿಡಿಯಬೇಕು ಎಂದು ಪ್ರಸ್ತಾವನೆ ಮಂಡಿಸಿದರು.

ಬಳಿಕ ಸ್ಪೀಕರ್ ಯು.ಟಿ.ಖಾದರ್ ಪ್ರಸ್ತಾವನೆಯನ್ನು ಸಭೆಯ ಮತಕ್ಕೆ ಹಾಕಿ, ಅಂಗೀಕಾರ ಪಡೆದುಕೊಂಡು, 10  ಮಂದಿ ಬಿಜೆಪಿ ಸದಸ್ಯರು ಸದನದಿಂದ ಕೂಡಲೆ ಹೊರಗೆ ಹೋಗುವಂತೆ ಆದೇಶಿಸಿ, ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News