ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಕಾಗದ ಪತ್ರಗಳನ್ನು ಎಸೆದಿದ್ದು ಸಹಿಸಲು ಅಸಾಧ್ಯ: ಯು.ಟಿ.ಖಾದರ್

Update: 2023-07-21 13:25 GMT

ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು, ಜು.21: ವಿಧಾನಸಭೆಯಲ್ಲಿ ತಾನು ಉಪಸಭಾಧ್ಯಕ್ಷರನ್ನು ಪೀಠದಲ್ಲಿ ಕೂರಿಸಿ ಮಹತ್ವದ ಸಭೆಯೊಂದಕ್ಕೆ ತೆರಳಿದ್ದೆ. ಈ ವೇಳೆ ಸದನದಲ್ಲಿ 10 ಮಂದಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುವಾಗ ಉಪಸಭಾಧ್ಯಕ್ಷರ ಮುಖಕ್ಕೆ ಕಾಗದ ಪತ್ರಗಳನ್ನು ಹರಿದು ಎಸೆದಿದ್ದು ಸಹಿಸಲು ಅಸಾಧ್ಯವಾದದ್ದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜು.19ರಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರಕಾರದ ನಿಲುವನ್ನು ವಿರೋಧಿಸಿ ಸದನದ ಬಾವಿಯಲ್ಲಿ ಧರಣಿ ಮಾಡುತ್ತಿದ್ದರು ಎಂದರು.

ಇದೇ ಸಂದರ್ಭದಲ್ಲಿ ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಅಗೌರವವಾಗಿ, ಅಶಿಸ್ತಿನಿಂದ ನಮ್ಮ ರಾಜ್ಯಕ್ಕೆ ಹಾಗೂ ಜನತೆಯ ಭಾವನೆಗಳಿಗೆ ಕಪ್ಪು ಚುಕ್ಕೆ ಬರುವಂತೆ ವರ್ತಿಸಿರುವುದರಿಂದ ಅತ್ಯಂತ ನೋವಿನಿಂದ ಆ ಸದಸ್ಯರ ಹೆಸರಿಸಿ ಸದನಕ್ಕೆ ಬಾರದಂತೆ ಅಮಾನತುಗೊಳಿಸಲಾಯಿತು. ಸಭಾಧ್ಯಕ್ಷನಾಗಿ, ಈ ಪೀಠದ ಗೌರವವನ್ನು ಉಳಿಸುವಂತಹ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ಸದನವು ಅತ್ಯಂತ ಗೌರವ ಮತ್ತು ಪವಿತ್ರವಾದದು ಎಂದು ಭಾವಿಸಿ, ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.

ನಾನು ಈಗ ಸದನದ ಸಭಾಧ್ಯಕ್ಷ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಸೇರಿದವನಲ್ಲ. ನನಗೆ ಯಾವುದೆ ಪಕ್ಷ ಇಲ್ಲ. ರಾಜ್ಯದ, ಜನರ ಸಮಸ್ಯೆಗಳನ್ನು ಚರ್ಚೆ ನಡೆಸಲು ಅಧಿವೇಶನ ಕರೆಯುವುದು. ಚುನಾಯಿತ ಪ್ರತಿನಿಧಿಗಳು ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಬಾರದು ಎಂದು ಅವರು ಹೇಳಿದರು.

ರಾಜ್ಯಪಾಲರು ರಾಜ್ಯದ ಸಂವಿಧಾನದ ಮುಖ್ಯಸ್ಥರು. ಸದನದಲ್ಲಿ ನಡೆದಂತಹ ಘಟನೆ ಹಾಗೂ ಸದಸ್ಯರ ಅಮಾನತ್ತು ವಿಚಾರ ಮಾಧ್ಯಮಗಳ ಮೂಲಕ ಅಥವಾ ಇನ್ಯಾವುದೊ ರೀತಿಯಲ್ಲಿ ಅವರಿಗೆ ತಿಳಿಯುವುದಕ್ಕಿಂತ ಸ್ಪೀಕರ್ ಆಗಿ ನಾನೆ ಅವರಿಗೆ ವರದಿ ನೀಡುವುದು ತನ್ನ ಕರ್ತವ್ಯ. ಆದುದರಿಂದ, ನಾನು ರಾಜ್ಯಪಾಲರನ್ನು ಭೇಟಿಯಾಗಿ ವರದಿ ನೀಡಿದ್ದೇನೆ ಎಂದು ಖಾದರ್ ಹೇಳಿದರು.

ಇದೇ ವೇಳೆ ದೇಶದ ವಿವಿಧ ರಾಜ್ಯಗಳ ನಾಯಕರು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಸುತ್ತಿದ್ದಾಗ ಸ್ಪೀಕರ್ ಅಲ್ಲಿಗೆ ಭೇಟಿ ನೀಡಿದ್ದು ಏಕೆ? ಎಂದು ಪ್ರಶ್ನಿಸಿರುವ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, ಮುಖ್ಯಮಂತ್ರಿಯು ಗಣ್ಯರನ್ನು ರಾಜ್ಯ ಅತಿಥಿಗಳಾಗಿ ಗೌರವಿಸಿ ಔತಣಕೂಟ ಏರ್ಪಡಿಸಿದ್ದರು. ನನಗೂ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರಿಂದ ನಾನು ಹೋಗಿದ್ದೆ. ಅಲ್ಲಿ ಯಾವುದೊ ಸಭೆಯಲ್ಲಿ ಭಾಗವಹಿಸಲು ಹೋಗಿರಲಿಲ್ಲ ಎಂದರು.

ಈ ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಮಂಡನೆಯಾಗಿದ್ದ ವಿಧೇಯಕಗಳ ಬಗ್ಗೆ ಸದಸ್ಯರು ಮಾಹಿತಿಯನ್ನು ಪಡೆದು ಚರ್ಚಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದನದ ಆವರಣದಲ್ಲ್ಲಿದ್ದು, ಮಾಹಿತಿಯನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಸಲಾಗಿತ್ತು. ಹಲವು ಶಾಸಕರು ಇದರ ಉಪಯೋಗ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು ಎಂದು ಅವರು ಹೇಳಿದರು.

ಸದನದ ಕಾರ್ಯ ಕಲಾಪಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸಹಕಾರಿಯಾಗುವಂತೆ, ನಿಗದಿತ ಸಮಯದಲ್ಲಿ ಹಾಜರಾದ ಸದಸ್ಯರ ಹೆಸರುಗಳನ್ನು ಪ್ರತಿ ದಿನ ಪ್ರಕಟಿಸಲಾಗುತ್ತಿತ್ತು. ಸರಾಸರಿ ಸದಸ್ಯರ ಹಾಜರಾತಿ ಶೇ.92ರಷ್ಟಿತ್ತು. ವರ್ಷಕ್ಕೆ ಕನಿಷ್ಠ 60 ದಿನ ಸದನ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಅವರು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News