ಬೆಂಗಳೂರು: ಟೊಮೆಟೋ ತುಂಬಿದ್ದ ವಾಹನ ಕಳವು ಪ್ರಕರಣ; ದಂಪತಿ ಬಂಧನ

Update: 2023-07-22 16:38 GMT

ಬೆಂಗಳೂರು: ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆ, ಲಕ್ಷಾಂತರ ರೂ. ಮೌಲ್ಯದ ಟೊಮೆಟೋ ತುಂಬಿದ್ದ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಆರ್‍ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮಾಹಿತಿ ನೀಡಿರುವ ಡಿಸಿಪಿ ಶಿವಪ್ರಕಾಶ್ ದೇವರಾಜ್, ಭಾಸ್ಕರ್ ಹಾಗೂ ಆತನ ಪತ್ನಿ ಸಿಂಧುಜಾ ಬಂಧಿತ ದಂಪತಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ರಾಕಿ, ಕುಮಾರ್, ಮಹೇಶ್ ಎಂಬುವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಜು.8ರಂದು ಚಿತ್ರದುರ್ಗದ ಹಿರಿಯೂರು ತಾಲೂಕಿನ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಕೆಜಿಯಷ್ಟು ಟೊಮೆಟೋವನ್ನು ಕೋಲಾರಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಆರ್‍ಎಂಸಿ ಯಾರ್ಡ್ ಬಳಿ ಕಾರಿನಲ್ಲಿ ಬಂದಿದ್ದ ಆರೋಪಿಗಳು, ‘ತಮ್ಮ ಕಾರಿಗೆ ನಿಮ್ಮ ವಾಹನ ಢಿಕ್ಕಿಯಾಗಿದೆ’ ಎಂದು ಬಲವಂತದಿಂದ ಗೂಡ್ಸ್ ವಾಹನ ನಿಲ್ಲಿಸಿ ಚಾಲಕ ಹಾಗೂ ರೈತನ ಮೇಲೆ ಹಲ್ಲೆ ನಡೆಸಿದ್ದರು. ಚಾಲಕ ಹಾಗೂ ರೈತನನ್ನು ಕೂರಿಸಿಕೊಂಡು ಹೋಗಿ ಚಿಕ್ಕಜಾಲ ಬಳಿ, ಬಿಟ್ಟು ಟೊಮೆಟೋ ತುಂಬಿದ್ದ ವಾಹನ ಸಮೇತ ಚೆನ್ನೈಗೆ ಪರಾರಿಯಾಗಿ ಅಲ್ಲಿ ಮಾರಾಟ ಮಾಡಿದ್ದರು. ಬಳಿಕ ಖಾಲಿ ವಾಹನವನ್ನು ತಂದು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು ಎಂದು ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ

ಈ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸಿದ ಆರ್‍ಎಂಸಿ ಯಾರ್ಡ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಮುಂದುವರೆದಿದೆ ಎಂದು ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News