ʼನಂಬಿಕೆ ನಕ್ಷೆ, ಹೊಸ ಆಸ್ತಿ ತೆರಿಗೆ ಹಾಗೂ ಖಾತಾ ವ್ಯವಸ್ಥೆʼಗೆ ಉಪ‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ

Update: 2024-03-11 14:58 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಯುನಿಟ್ ಮನೆ ನಿರ್ಮಾಣಕ್ಕೆ ನಂಬಿಕೆ ನಕ್ಷೆ ಕಡ್ಡಾಯಗೊಳಿಸುವ ಜತೆಗೆ, ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 50*80 ಅಡಿ ವಿಸ್ತೀರ್ಣವರೆಗಿನ ನಿವೇಶನಗಳಲ್ಲಿ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ನೊಂದಾಯಿತ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಅಥವಾ ಇಂಜಿನಿಯರ್ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್‍ಲೈನ್ ಮೂಲಕ ಸ್ವಯಂ ಅನುಮತಿ ಪಡೆಯುವ ‘ನಂಬಿಕೆ ನಕ್ಷೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ನಂಬಿಕೆ ನಕ್ಷೆ ಜತೆಗೆ ಬೆಂಗಳೂರಿಗರ ಸಮಸ್ಯೆಗೆ ಪರಿಹಾರ ನೀಡಲು ಹೊಸ ಆಸ್ತಿ ತೆರಿಗೆ ಪದ್ಧತಿ ಹಾಗೂ ಆಸ್ತಿ ತೆರಿಗೆ ಖಾತಾ ವಿತರಣೆಯಂತಹ ಕ್ರಾಂತಿಕಾರಕ ಹೆಜ್ಜೆ ಇಡಲಾಗಿದೆ. ಈ ಯೋಜನೆಯಿಂದಾಗಿ ಸಾರ್ವಜನಿಕರು ತಮ್ಮ ಕಟ್ಟಡದ ನಕ್ಷೆಗೆ ಅನುಮತಿ ಪಡೆಯಲು ಪಾಲಿಕೆ ಕಚೇರಿಗಳನ್ನು ಅಲೆಯುವಂತಿಲ್ಲ. ಜತೆಗೆ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗುವುದಿಲ್ಲ ಎಂದು ಅವರು ಹೇಳಿದರು.

ಅನುಮತಿ ನೀಡುವ ವಾಸ್ತುಶಿಲ್ಪಿಗಳು ಹಾಗೂ ಇಂಜಿನಿಯರ್ ಗಳು ಸರಕಾರದ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು. ಕಟ್ಟಡದ ನಕ್ಷೆ ನಿಯಮಾನುಸಾರವಾಗಿ ತನ್ನದೇ ಆದ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಲಾಗುವುದು. ಆನ್‍ಲೈನ್‍ನಲ್ಲೆ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆ ಅನುಮತಿ ನೀಡಲಾಗಿದೆ. ಈ ಬಾರಿ 10 ಸಾವಿರ ನಕ್ಷೆ ಅನುಮತಿ ನೀಡಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ವಿವರಿಸಿದರು.

ಹೊಸ ತೆರಿಗೆ ಪದ್ಧತಿ: 2020ರಲ್ಲಿ ಬಿಜೆಪಿ ಸರಕಾರ ತೆರಿಗೆ ಕಾಯ್ದೆ ವಿಚಾರವಾಗಿ ತಿದ್ದುಪಡಿ ಮಾಡಿದ್ದರು. ಅದರಲ್ಲಿ ತೆರಿಗೆ ಪಾವತಿ ವಿಚಾರದಲ್ಲಿ ಅನೇಕ ಏರುಪೇರುಗಳಾದವು. ಮನೆ ಬಾಗಿಲಿಗೆ ಬಂತು ಸರಕಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಅನೇಕ ದೂರುಗಳು ಬಂದಿದ್ದು, ಇದಕ್ಕೆ ಪರಿಹಾರ ನೀಡಲು ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ ಎಲ್ಲೆಲ್ಲಿ ದಂಡದ ಸಮಸ್ಯೆ ಇದೆ ಅಲ್ಲೆಲ್ಲಾ ತೆರಿಗೆ ಕಟ್ಟಿದವರಿಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಇನ್ನೂ, ಬೆಂಗಳೂರಿನ ನಾಗರಿಕರು ಇದರ ಉಪಯೋಗ ಪಡೆಯಬೇಕು. ದಂಡವನ್ನು ಶೇ.200 ರಿಂದ ಶೇ.100 ಕ್ಕೆ ಇಳಿಸಿದ್ದೇವೆ. ನಾವು 5 ವರ್ಷದವರೆಗೂ ಲೆಕ್ಕಾಚಾರದಲ್ಲಿ ತೆರಿಗೆ ಬಾಕಿಯನ್ನು ವಸೂಲಿ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಪ್ರಸ್ತುತ ಇದ್ದ ಯುನಿಟ್ ವಿಸ್ತೀರ್ಣ ಮೌಲ್ಯ ಆಸ್ತಿ ತೆರಿಗೆ ಪದ್ಧತಿಯನ್ನು 2008ರಲ್ಲಿ ಜಾರಿಗೊಳಿಸಲಾಗಿತ್ತು. ಆಗ ಆಸ್ತಿಗಳನ್ನು 18 ವರ್ಗೀಕರಣ ಮಾಡಲಾಗಿತ್ತು. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮಾರ್ಗಸೂಚಿ ದರವನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ಏಕರೂಪದ ಆಸ್ತಿ ತೆರಿಗೆ ನಿಗದಿ ಮಾಡಲಾಗಿದೆ. ಈ ವ್ಯವಸ್ಥೆಯಿಂದ ತೆರಿಗೆ ಪದ್ಧತಿಯನ್ನು ಸರಳೀಕರಣ ಮಾಡಲಾಗಿದೆ. ಈಗ ನಾವು 6 ವರ್ಗೀಕರಣಗಳನ್ನು ಮಾಡಿದ್ದು, ವಸತಿ (ಸ್ವಂತ ಬಳಕೆ ಹಾಗೂ ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೊಟೇಲ್, ವಿನಾಯಿತಿ ನೀಡಲಾದ ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂಬ ವರ್ಗೀಕರಣ ಮಾಡಲಾಗಿದೆ.

ಕಳೆದ ಬಾರಿ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದ್ದು 2016ರಲ್ಲಿ. ಆಗ ವಸತಿ ಆಸ್ತಿಗಳಿಗೆ ಶೇ.20ರಷ್ಟು ವಸತಿಯೇತರ ಉದ್ದೇಶದ ಆಸ್ತಿಗಳಿಗೆ ಶೇ.25ರಷ್ಟು ಏರಿಕೆಯಾಗಿತ್ತು. ಕಳೆದ ಎಂಟು ವರ್ಷಗಳಿಂದ ಆಸ್ತಿ ಮೌಲ್ಯ ಏರಿಕೆಯಾಗಿರಲಿಲ್ಲ. ಈಗ ನಾವು ಈ ಬಗ್ಗೆ ಚರ್ಚೆ ಮಾಡಿ ಇದನ್ನು ಕಡಿಮೆ ಮಾಡಲು, ಆಸ್ತಿ ತೆರಿಗೆ ಹೆಚ್ಚಳದ ಮಿತಿಯನ್ನು ಶೇ.10ಕ್ಕೆ ನಿಗದಿ ಪಡಿಸಲಾಗಿದೆ ಎಂದೂ ಅವರು ಹೇಳಿದರು.

ಬೆಂಗಳೂರಿನಲ್ಲಿ 18 ಲಕ್ಷ ಆಸ್ತಿ ಮಾಲಕರು ತೆರಿಗೆ ವ್ಯಾಪ್ತಿಯಲ್ಲಿ ಒಳಪಡುತ್ತಿಲ್ಲ. ಇವರೆಲ್ಲರೂ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯೊಳಗೆ ಬರಬೇಕು ಎಂದ ಅವರು, ಯಾರೆಲ್ಲಾ ಆಸ್ತಿ ತೆರಿಗೆ ಪಾವತಿಗೆ ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿಲ್ಲವೋ ಅವರಿಗೆ ಒಂದು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ನಾಗರಿಕರು ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಸಂಖ್ಯೆ ಮತ್ತು ಬಿಬಿಎಂಪಿ ಖಾತಾ ನೀಡಲಾಗುವುದು. ಬಿಬಿಎಂಪಿಯಿಂದ ದಾಖಲೆ ಸರಿಯಾಗಿ ಇರುವರಿಗೆ ಎ ಖಾತಾ ನೀಡುತ್ತೇವೆ. ಕನ್ವರ್ಷನ್ ಮಾಡಿಕೊಳ್ಳದೇ, ಯೋಜನೆ ಇಲ್ಲದವರಿಗೆ ಬಿ ಖಾತಾ ನೀಡಲಾಗುವುದು ಎಂದು ಶಿವಕುಮಾರ್ ಪ್ರಕಟಿಸಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷ ಎನ್.ಎ. ಹಾರೀಸ್, ಶಾಸಕ ರಿಝ್ವಾನ್ ಆರ್ಶದ್, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News